ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೮

ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೮

ತಿಮ್ಮರಾಜ ಒಡೆಯರ್-(ಎರಡು)

ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ತಮ್ಮ ಆನಂತರ ಮೊದಲ ಮಗ ತಿಮ್ಮರಾಜ ಒಡೆಯರಿಗೆ ಮೈಸೂರಲ್ಲಿ ಪಟ್ಟಾಭಿಷೇಕ ಮಾಡಬೇಕು ಎಂಬ ನಿಬಂಧನೆ ಮಾಡಿದ್ದರು. ಅದರಂತೆ ಪಟ್ವವನ್ನು ಪಡೆದ ತಿಮ್ಮರಾಜರು 1511ರ ಸೆಪ್ಟೆಂಬರ್ 16ರಂದು ಜನಿಸಿದರು. ತಿಮ್ಮವನಿಪ, ತಿಮ್ಮರಾಜೇಂದ್ರ ಎಂದು ಶಾಸನಗಳು ಇವರನ್ನು ಹೆಸರಿಸಿ. ನೀತಿವಿದಂ ನಿಪುಣರೆರೆಯನ್ ಎಂದು ಸ್ತುತಿಸಿವೆ. 1552ರ ಫೆಬ್ರವರಿಯಲ್ಲಿ ಸಿಂಹಾಸನಾರೋಹಣರಾದರು. ಇವರ ರಾಜ್ಯಭಾರದ ಅವಧಿ 19 ವರ್ಷ ತೊರವಳ್ಳಿ ಮಂಗಪ್ಪ ಒಡೆಯರ್ ಮಗಳು ಕೆಂಪಮ್ಮಣ್ನಿ ಇವರ ಹೆಂಡತಿ, ಬೆಟ್ಟದ ಒಡೆಯ ಎಂಬ ಮಗ ಇವರಿಗಿದ್ದ, ಆದರೆ ಇದನ್ನು ಸಿ.ಹಯವದನರಾಯರು ಅನುಮೋದಿಸಿಲ್ಲ.

ವಿಜಯನಗರ ಅರಸರಾದ ಸದಾಶಿವರಾಯ ಹಾಗೂ ಮೊದಲ ತಿರುಮಲರ ಸಮಕಾಲಿನ ತಿಮ್ಮರಾಜ, ಸಿಂಧುವಳ್ಳಿ ಹುಣಸಹಾಳು ಮೊದಲಾದ ಮುಖ್ಯಸ್ಥರನ್ನು ರಕ್ಷಿಸಿದ್ದಲ್ಲದೆ ಈತ ಉಮ್ಮತ್ತೂರಿನ ಪಾಳೇಗಾರನನ್ನು ಗೆದ್ದು ಮೊನೆಗಾರ ಎನಿಸಿಕೊಂಡಿದ್ದ. ಈತ ಮೈಸೂರು ಒಡೆಯರ ನೆಚ್ಚಿನ ಬಿರುದಾದ “ಬಿರುದೆಂತೆಂಬರ ಗಂಡ’ ಎಂಬ ಬಿರುದಿಗೆ ಕಾರಣಪುರಷ. ಇದು ಪ್ರಾಪ್ತವಾದ ಸಂದರ್ಭ ಹೀಗಿದೆ. ತಿಮ್ಮರಾಜ ಆಳುತ್ತಿದ್ದುದು ಮೈಸೂರಿನಲ್ಲಿ, ನಂಜನಗೂಡಿನ ರಥೋತ್ಸವಕ್ಕೆ ಹೋಗಿ ಸೇವೆ ಸಲ್ಲಿಸುವುದು ಮನೆತನದ ಪದ್ದತಿ, ಒಮ್ಮೆ ಅಲ್ಲಿಗೆ ಇತರ ಪಾಳೆಗಾರರರು ಬಂದಿದ್ದು, ತಮ್ಮ ತಮ್ಮ ಬಿರುದುಗಳನ್ನು ವಂದಿಮಾಗಧರಿಂದ ಉಗ್ಘಡಿಸಿಕೊಳ್ಳುತ್ತ ನಡೆದರು, ಅಲ್ಲಿಯೇ ಇದ್ದ ತಿಮ್ಮರಾಜರ ನಚ್ಚಿನಭಂಟ ಕಳಲೆಯ ನಂಜಸೆಟ್ಟಿಗೆ ಇದು ಹಿಡಿಸಲಿಲ್ಲ. ಎಲ್ಲರೂ ಎಲ್ಲ ಬಿರುದುಗಳನ್ನು ಕೂಗುವವರೆಗೂ ಸುಮ್ಮನಿದ್ದು ತನ್ನ ಒಡೆಯನ ಹೆಸರನ್ನು, ಬಿರುದುಗಳನ್ನು ಹೇಳಿ ‘ಅಂತೆಂಬರ ಗಂಡ, ಬಿರುದೆಂತೆಂಬರ ಗಂಡ’ ಎಂದು ಉಗ್ಘಡಿಸಿದ. ಬಿರುದೆಂತೆಂಬರ ಗಂಡ ಎಂಬುದು ತನ್ನ ರಾಜನಿಗೆ ಮಾತ್ರ ಸಲ್ಲುವ ಬಿರುದು ಎಂದು ವಾದಿಸಿದ. ಉಳಿದ ಪಾಳೆಗಾರರಿಗೆ ಸಿಟ್ಟುಬಂದು ಸೆಟ್ಟಿಯನ್ನು ಶಿಕ್ಷಿಸಲು ಹಿಡಿದೊಯ್ದರು. ಈ ವರ್ತಮಾನ ತಿಮ್ಮರಾಜ ಒಡೆಯರಿಗೆ ತಿಳಿಯತು. ಅವರು ಧಾವಿಸಿ ಬಂದು ಪಾಳೆಯಗಾರರನ್ನು ಜಯಿಸಿ, ಸೆಟ್ಟಿಯನ್ನು ಬಿಡಿಸಿ, ಬಿರುದೆಂತೆಂಬರ ಗಂಡ ಎಂಬುದನ್ನು ಧರಿಸಿದರು. ಇತರ ಪಾಳೆಯಗಾರರ ಆನೆ, ಅಂದಣ ಇವ ಸ್ವಾಧೀನವಾಯಿತು.

ಇತರ ಪ್ರಾಣಿಗಳ ಹೆಜ್ಜೆ ಆನೆಯ ಒಂದು ಹೆಜ್ಜೆಯಲ್ಲಿ ಅಡಕವಾಗುವಂತೆ, ಎಲ್ಲ ನದಿಗಳೂ ಒಂದೇ ಸಮುದ್ರದಲ್ಲಿ ಸೇರಿ ಹೋಗುವಂತೆ, ಮಹಾಭೂತಗಳನ್ನು ಆಕಾಶ ಆವರಿಸುವಂತೆ ಇತರ ರಾಜರ ಬಿರುದುಗಳು ಒಡೆಯರ ಬಿರುದಿಗೆ ಅಧೀನವಾಗುವುದರ ಸೂಚಕ ಬಿರುದೆಂತೆಂಬರ ಗಂಡ. ಪ್ರಶಸ್ತಿಯನ್ನು ಗಳಿಸಿದ ವೀರರನ್ನು ನಿಗ್ರಹಿಸಬಲ್ಲ ಎಂಬರ್ಥದಲ್ಲಿ ಬಂದಿದೆ. 1572ರಲ್ಲಿ ನಿಧನರಾದರು.

ಮುಂದಿನ ಭಾಗ ನಾಳೆಯ ಸಂಚಿಕೆಯಲ್ಲಿ ….

Leave a Reply

Your email address will not be published.