ನೀತಿ ಸಂಹಿತೆ ಉಲ್ಲಂಘನೆ: ಸಚಿವರ ಕಚೇರಿಗೆ ಬೀಗ ಜಡಿದ ಜಿಲ್ಲಾಧಿಕಾರಿ ರೋಹಿಣಿ

ನೀತಿ ಸಂಹಿತೆ ಉಲ್ಲಂಘನೆ: ಸಚಿವರ ಕಚೇರಿಗೆ ಬೀಗ ಜಡಿದ ಜಿಲ್ಲಾಧಿಕಾರಿ ರೋಹಿಣಿ

ಬೆಂಗಳೂರು, ಎ. 2: ಆಡಳಿತ ವರ್ಗದ ಮಾತಿಗೆ ಬೆಲೆ ನೀಡಿಲ್ಲವೆಂಬ ಕಾರಣಕ್ಕೆ ಜನವರಿಯಲ್ಲಿ ಹಾಸನ ಜಿಲ್ಲಾಧಿಕಾರಿ ಸ್ಥಾನದಿಂದ ವರ್ಗಾಯಿಸಲ್ಪಟ್ಟಿದ್ದರೂ ಇತ್ತೀಚೆಗೆ ಅದೇ ಹುದ್ದೆಯಲ್ಲಿ ಮರು ಸ್ಥಾಪಿಸಲ್ಪಟ್ಟಿದ್ದ ದಿಟ್ಟ ಐಎಎಸ್ ಅಧಿಕಾರಿಣಿ ರೋಹಿಣಿ ಶನಿವಾರ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ ಮಂಜು ಅವರು ಪಿಡಬ್ಲ್ಯುಡಿ ಇನ್‌ಸ್ಪೆಕ್ಷನ್ ಬಂಗಲೆಯಲ್ಲಿದ್ದ ಕಚೇರಿಗೆ ಬೀಗ ಜಡಿದು ಮತ್ತೆ ಸುದ್ದಿಯಲ್ಲಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿಯಾಗಿರುವ ರೋಹಿಣಿ, ಸಚಿವ ಹಾಗೂ ಲೋಕೊಪಯೋಗಿ ಇಲಾಖೆಗೆ ನೋಟಿಸ್ ಜಾರಿಗೊಳಿಸಿ ಸರಕಾರಿ ಸ್ಥಳವನ್ನು ಚುನಾವಣಾ ಕೆಲಸಗಳಿಗಾಗಿ ಉಪಯೋಗಿಸುತ್ತಿರುವುದು ಚುನಾವಣಾ ನೀತಿ ಸಂಹಿತೆಗೆ ವಿರುದ್ಧ ಎಂದು ಹೇಳಿ ಸಚಿವರ ಕಚೇರಿಗೆ ಬೀಗ ಜಡಿದಿದ್ದರು.

ರಾಜಕಾರಣಿಗಳ ವಿರುದ್ಧ ರೋಹಿಣಿ ಸಿಂಧೂರಿ ಸೆಟೆದು ನಿಂತಿರುವುದು ಇದೇ ಮೊದಲಲ್ಲ. ಜನವರಿಯಲ್ಲಿ ರಾಜ್ಯ ಸರಕಾರ ತಮ್ಮನ್ನು ವರ್ಗಾಯಿಸಿದ್ದನ್ನು ವಿರೋಧಿಸಿ ಆಕೆ ಕರ್ನಾಟಕ ಹೈಕೋರ್ಟ್ ಹಾಗೂ ಕೇಂದ್ರ ಆಡಳಿತಾತ್ಮಕ ಟ್ರಿಬ್ಯುನಲ್ ಮೊರೆ ಹೋಗಿದ್ದರು. ಮಹಾ ಮಸ್ತಕಾಭಿಷೇಕ ಏರ್ಪಾಟುಗಳ ಬಗ್ಗೆ ಸ್ಥಳೀಯ ರಾಕಾರಣಿಗಳು ಹಾಗೂ ಸಚಿವ ಮಂಜು ಜತೆ ಇದ್ದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಅವರನ್ನು ವರ್ಗಾಯಿಸಲಾಗಿತ್ತು ಎಂದು ಹೇಳಲಾಗಿದೆ. ಮಹಾ ಮಸ್ತಕಾಭಿಷೇಕ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ಮುಖ್ಯಮಂತ್ರಿಯನ್ನು ಶಿಷ್ಟಾಚಾರದಂತೆ ಎದುರುಗೊಳ್ಳಲು ಹಾಗೂ ಬೀಳ್ಕೊಡಲು ಅವರು ಆಗಮಿಸದೇ ಇದ್ದಾಗ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು.

ಎಲ್ಲಾ ವರ್ಗಾವಣೆಗಳನ್ನೂ ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳುವ ತನಕ ಮುಂದೂಡುವಂತೆ ಚುನಾವಣಾ ಆಯೋಗದ ಸೂಚನೆಯ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಜಿಲ್ಲಾಧಿಕಾರಿಯಾಗಿ ಮುಂದುವರಿಸಲಾಯಿತಾದರೂ ಮುಂದಿನ 48 ಗಂಟೆಗಳಲ್ಲಿ ಮತ್ತೆ ವರ್ಗಾವಣೆ ಆದೇಶ ನೀಡಲಾಗಿತ್ತು. ಕೇಂದ್ರ ಆಡಳಿತಾತ್ಮಕ ಟ್ರಿಬ್ಯೂನಲ್ ನಿರ್ಧಾರದ ತನಕ ಯಥಾಸ್ಥಿತಿ ಮುಂದುವರಿಸುವಂತೆ ಕಳೆದ ಮಂಗಳವಾರ ಹೈಕೋರ್ಟ್ ಆದೇಶ ನೀಡಿತ್ತು.

ಕರ್ನಾಟಕ ಕೇಡರ್ ನ 2009 ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ಅವರು ನವೆಂಬರ್ 2017ರಲ್ಲಿ ರೈತರ ಬೆಳೆ ವಿಮಾ ಯೋಜನೆಗೆ ಸಂಬಂಧಿಸಿದ ಬೆಳೆ ಸಮೀಕ್ಷೆ ನಡೆಸಿದ್ದಕ್ಕಾಗಿ ಮುಖ್ಯಮಂತ್ರಿಯಿಂದ ಪ್ರಶಂಸೆಗೊಳಗಾಗಿದ್ದರು. ಅವರಿಗೆ ಪತ್ರವನ್ನೂ ಬರೆದಿದ್ದ ಸಿಎಂ, ಮುಂದೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳ ಸಭೆಯಲ್ಲೂ ಅವರನ್ನು ಹೊಗಳಿದ್ದರು.

ಮಂಡ್ಯ ಜಿಲ್ಲಾ ಪಂಚಾಯತ್ ನಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಅವರ ಶ್ರಮವನ್ನು ಗುರುತಿಸಿ ಇತರ ರಾಜ್ಯಗಳ ಜಿಲ್ಲಾಧಿಕಾರಿಗಳನ್ನು ತರಬೇತಿಗೊಳಿಸುವ ಕಾರ್ಯವನ್ನು ರೋಹಿಣಿ ಅವರಿಗೆ ಕೇಂದ್ರ ವಹಿಸಿತ್ತು.

ಮೇ 30, 1984 ರಲ್ಲಿ ಜನಿಸಿದ ರೋಹಿಣಿ ಹೈದರಾಬಾದ್ ವಿವಿಯಿಂದ ಕೆಮಿಕಲ್ ಇಂಜಿನಿಯರಿಂಗ್ ಪದವೀಧರೆ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅವರು 43ನೇ ರ್ಯಾಂಕ್ ಪಡೆದಿದ್ದಾರೆ. ತುಮಕೂರು ಸಹಾಯಕ ಆಯುಕ್ತೆಯಾಗಿ ನೇಮಕಗೊಂಡಿದ್ದ ರೋಹಿಣಿ ನಂತರ ನಗರಾಭಿವೃದ್ಧಿ ಇಲಾಖೆಯ ಆಯುಕ್ತೆಯಾಗಿದ್ದರು.

ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸ್ವಉದ್ಯೋಗ ಯೋಜನೆಯ ನಿರ್ದೇಶಕಿಯಾಗಿದ್ದ ಅವರು ನಂತರ ಮೇ 2014ರಲ್ಲಿ ಮಂಡ್ಯ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು. ನಂತರ ಕರ್ನಾಟಕ ಆಹಾರ ಮತ್ತು ನಗರ ಪೂರೈಕೆ ನಿಗಮದ ಆಡಳಿತ ನಿರ್ದೇಶಕಿಯಾಗಿದ್ದ ಅವರನ್ನು ಜುಲೈ 2017ರಲ್ಲಿ ಹಾಸನ ಜಿಲ್ಲಾದಿಕಾರಿಯನ್ನಾಗಿ ನೇಮಿಸಲಾಗಿತ್ತು.

Leave a Reply

Your email address will not be published.