4000 ಸಿನಿಮಾಗಳನ್ನು ಪೂರೈಸಿದ ಕನ್ನಡ ಚಿತ್ರರಂಗದ ಪ್ರಮುಖಾಂಶಗಳು

4000 ಸಿನಿಮಾಗಳನ್ನು ಪೂರೈಸಿದ ಕನ್ನಡ ಚಿತ್ರರಂಗದ ಪ್ರಮುಖಾಂಶಗಳು

ಪ್ರತಿ ವಾರ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತದೆ. ಆದರೆ ಈಗ ಕನ್ನಡ ಚಿತ್ರರಂಗದ ಖಾತೆಗೆ 4000 ಸಾವಿರ ಸಿನಿಮಾಗಳು ಜಮಾ ಆಗಿವೆ. 85 ವರ್ಷದ ಇತಿಹಾಸ ಇರುವ ಕನ್ನಡ ಚಿತ್ರರಂಗದಲ್ಲಿ ಬಂದಿರುವ ಸಿನಿಮಾಗಳ ಸಂಖ್ಯೆ ಈಗ 4000ಕ್ಕೆ ತಲುಪಿದೆ. ಮಾರ್ಚ್ ತಿಂಗಳ 30ನೇ ತಾರೀಕು ರಿಲೀಸ್ ಆದ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ 4000 ಸಿನಿಮಾಗಳ ಗಡಿ ದಾಟಿದೆ. 1934 ರಲ್ಲಿ ಶುರು ಆದ ಕನ್ನಡ ಚಿತ್ರರಂಗದ ಪ್ರಯಾಣ ಸದ್ಯ ಇಲ್ಲಿಗೆ ಬಂದಿದೆ. ಎಷ್ಟೋ ವರ್ಷದಲ್ಲಿ ನಟರು, ನಟಿಯರು ಈ ಸಿನಿಮಾಗಳ ಮೂಲಕ ಹುಟ್ಟಿಕೊಂಡಿದ್ದಾರೆ, ಇಷ್ಟು ವರ್ಷದ ಪಯಣದಲ್ಲಿ ಎಷ್ಟೋ ಮರೆಯಲಾಗದ ಘಟನೆಗಳು ನಡೆದಿದೆ. ಇಂದು ಕನ್ನಡ ಚಿತ್ರರಂಗ ಭಾರತ ನಾಲ್ಕನೇ ಅತಿ ದೊಡ್ಡ ಚಿತ್ರರಂಗವಾಗಿದೆ.

ಮೊದಲ ಸಿನಿಮಾ ‘ಸತಿ ಸುಲೋಚನಾ’

ಮಾರ್ಚ್ 4, 1934ರಲ್ಲಿ ಬಿಡುಗಡೆಯಾದ ‘ಸತಿ ಸುಲೋಚನಾ’ ಚಿತ್ರ ಕನ್ನಡದ ಮೊದಲ ವಾಕ್ಚಿತ್ರವಾಗಿದೆ. ಈ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗದ ಖಾತೆ ತೆರೆದುಕೊಂಡಿತು. ರಾಮಾಯಣವನ್ನು ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿತ್ತು. ನಾಟಕಕಾರ ಸುಬ್ಬಯ್ಯ ನಾಯ್ಡು ಚಿತ್ರದಲ್ಲಿ ನಟಿಸಿದ್ದು, ಯರಗುಡಿಪತಿ ವರದ ರಾವ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಚಿಕ್ಕಪೇಟೆಯ ವ್ಯಾಪಾರಿ ‍ಷಾ ಚಮನ್ ಮಲ್ ಡುಂಗಾಜಿ ಹಾಗೂ ಷಾ ಭೂರ್ ಮಲ್ ಚಮನ್ ಮಲ್ ಡುಂಗಾಜಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರದ ನಂತರ ‘ಭಕ್ತ ಧ್ರುವ’ ಕನ್ನಡದ ಎರಡನೇ ಚಿತ್ರವಾಗಿದೆ.

‘ಬೇಡರ ಕಣ್ಣಪ್ಪ’ನಾಗಿ ಬಂದ ಮುತ್ತುರಾಜ್

ಕನ್ನಡ ಚಿತ್ರರಂಗ ಆಗಿನ್ನು 20 ವರ್ಷ ಹೆರೆಯದಲ್ಲಿ ಇತ್ತು. ಆ ವೇಳೆಯಲ್ಲಿ ‘ಬೇಡರ ಕಣ್ಣಪ್ಪ’ನಾಗಿ ರಾಜಕುಮಾರನ ಆಗಮನ ಆಯ್ತು. ರಾಜ್ ಕುಮಾರ್ ಅವರ ಮೊದಲ ಸಿನಿಮಾ ‘ಬೇಡರ ಕಣ್ಣಪ್ಪ’ 1954 ರಲ್ಲಿ ಬಿಡುಗಡೆಯಾಯಿತು. ಮುತ್ತುರಾಜ್ ಈ ಚಿತ್ರದಿಂದ ರಾಜ್ ಕುಮಾರ್ ಆಗಿ ಬದಲಾದರು. ಮುಂದೆ ಈ ನಟ 200ಕ್ಕೂ ಹೆಚ್ಚು ಸಿನಿಮಾ ಮಾಡಿ ಕನ್ನಡಿಗರ ಕಣ್ಮಣಿ ಆದರು.

ಸ್ನೇಹಜೀವಿ ವಿಷ್ಣು, ವೇಗದ ಶಂಕರ್

ರಾಜ್ ಕುಮಾರ್ ನಂತರ ಬಂದ ನಟರಲ್ಲಿ ಹೆಚ್ಚು ಕಾಲ ಉಳಿದ ನಟ ಅಂದರೆ ವಿಷ್ಣುವರ್ಧನ್. ‘ವಂಶವೃಕ್ಷ’ ಚಿತ್ರದಿಂದ ಸಿನಿಮಾ ಪ್ರಯಾಣ ಶುರು ಮಾಡಿ, ‘ನಾಗರಹಾವು’ ಚಿತ್ರದ ಮೂಲಕ ಜನ ಮನ ಗೆದ್ದ ಈ ನಟ ಮುಂದೆ ಸಾಹಸ ಸಿಂಹನಾಗಿ ಮಿಂಚಿದರು. ಇನ್ನೊಂದು ಕಡೆ ನಟ ಶಂಕರ್ ನಾಗ್ ತಮ್ಮ ಹೊಸ ಆಲೋಚನೆ ಮತ್ತು ತಮ್ಮ ಕೆಲಸದ ಮೂಲಕ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದರು. ರಾಜ್ ಕುಮಾರ್, ವಿಷ್ಣುವರ್ಧನ್ ಮತ್ತು ಶಂಕರ್ ನಾಗ್ ಮೂರು ನಟರು ಮೂರು ಮುತ್ತುಗಳು

ನಿರ್ದೇಶಕ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್

1967 ರ ‘ಬೆಳ್ಳಿ ಮೋಡ’ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಒಬ್ಬ ದೈತ್ಯ ನಿರ್ದೇಶಕನ ಪ್ರವೇಶ ಆಗುತ್ತಿದೆ ಅವರೇ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್. ಪುಟ್ಟಣ್ಣ ಇಂದಿಗೂ ಕನ್ನಡದ ಎಲ್ಲ ನಿರ್ದೇಶಕರಿಗೆ ಸ್ಫೂರ್ತಿ ನೀಡುವ ನಿರ್ದೇಶಕ. ‘ಗೆಜ್ಜೆ ಪೂಜೆ’, ‘ರಂಗನಾಯಕಿ’, ಮಾನಸ ಸರೋವರ’ ಸೇರಿದಂತೆ ಸಾಕಷ್ಟು ಹೊಸ ಹೊಸ ಬಗೆಯ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟ ಖ್ಯಾತಿ ಅವರಿಗೆ ಇದೆ.

 

ಮೊದಲ ಕಲರ್ ಸಿನಿಮಾ

ಪರದೆ ಮೇಲೆ ಕಪ್ಪು ಬಿಳಿಪು ಎರಡೇ ಬಣ್ಣ ನೋಡುತ್ತಿದ್ದ ಪ್ರೇಕ್ಷಕರಿಗೆ ಹೊಸ ಜಗತ್ತನ್ನು ತೋರಿಸಿದ್ದು ‘ಅಮರಶಿಲ್ಪಿ ಜಕಣಾಚಾರಿ’ ಚಿತ್ರ. 1964ರಲ್ಲಿ ಬಂದ ಈ ಸಿನಿಮಾ ಕನ್ನಡದ ಮೊದಲ ಕಲರ್ ಸಿನಿಮಾವಾಗಿದೆ. ಈ ಚಿತ್ರವನ್ನು ಬಿ.ಎಸ್.ರಂಗ ಅವರು ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದರು.

ಭದ್ರವಾಗಿ ಬೆಳೆದ ನಟ, ನಟಿಯರು

ರಾಜ್ ಕುಮಾರ್, ವಿಷ್ಣುವರ್ಧನ್ ಮತ್ತು ಶಂಕರ್ ನಾಗ್ ಅವರ ಹೊರತಾಗಿ ಅಂಬರೀಶ್ ಪ್ರೇಕ್ಷಕರ ಮುಂದೆ ಪಾಸ್ ಆದರು. ‘ನಾಗರಹಾವು’ ಮೂಲಕ ವಿಲನ್ ಆಗಿ ಎಂಟ್ರಿ ಕೊಟ್ಟ ಅಂಬರೀಶ್ ಮುಂದೆ ನಾಯಕನಾದರು. ಇಂದಿಗೂ ಅಂಬಿ ಸಿನಿಮಾ ಮಾಡುತ್ತ ಇದ್ದಾರೆ. ಉಳಿದಂತೆ, ಅನಂತ್ ನಾಗ್, ಶ್ರೀನಾಥ್, ದ್ವಾರಕೀಶ್, ಲೋಕೇಶ್, ಪ್ರಭಾಕರ್, ದೇವರಾಜ್, ಕಾಶೀನಾಥ್ ಚಿತ್ರರಂಗದಲ್ಲಿ ಭದ್ರವಾಗಿ ಬೆಳೆದು ನಿಂತರು. ನಟಿಯರ ಸಾಲಿನಲ್ಲಿ ಲೀಲಾವತಿ, ಕಲ್ಪನಾ, ಆರತಿ, ಭಾರತಿ, ಜಯಂತಿ, ಲಕ್ಷ್ಮಿ, ತಾರಾ, ಪ್ರೇಮ ಸಿನಿಪ್ರಿಯರ ಪ್ರೀತಿ ಪಡೆದರು.

1000 – ದೇವರೆಲ್ಲಿದ್ದಾನೆ?

2000 – ಹ್ಯಾಟ್ಸ್ ಆಫ್ ಇಂಡಿಯಾ

3000 – ಕಿರಾತಕ

4000 – ಮಾರ್ಚ್ 30ಕ್ಕೆ 2018 ರಂದು ರಿಲೀಸ್ ಆದ ಸಿನಿಮಾಗಳು (ಜಾನಿ ಜಾನಿ ಎಪ್ ಪಪ್ಪಾ, ಗುಳ್ಟು, ಹೀಗೊಂದು ದಿನ, ಇದೀಗ ಬಂದ ಸುದ್ದಿ)

Leave a Reply

Your email address will not be published.