ಚಾಮುಂಡಿಬೆಟ್ಟ ಮೊದಲು ಬೇರೆಯಾಗಿತ್ತು. ಆ ಮೂಲ ಏನು ಗೊತ್ತಾ?

ಚಾಮುಂಡಿಬೆಟ್ಟ ಮೊದಲು ಬೇರೆಯಾಗಿತ್ತು. ಆ ಮೂಲ ಏನು ಗೊತ್ತಾ?

ಚಾಮುಂಡೇಶ್ವರಿ ದೇವಾಲಯ ಪ್ರಸಿದ್ಧಿಗೆ ಬಂದದ್ದು ಮೈಸೂರು ಅರಸರು ಪ್ರವರ್ಧಮಾನಕ್ಕೆ ಬಂದ ನಂತರ. ಅಂದರೆ ಒಡೆಯರ್ ರಾಜ್ಯ ಸ್ಥಾಪನೆ ಮಾಡಿದ್ದು 1399ರಲ್ಲಿ. ನಂತರ ರಾಜ್ಯವಿಸ್ತರಣೆ ಮಾಡಿಕೊಂಡು ಹೆಸರುಗಳಿದ ಮೈಸೂರು ರಾಜರು ತಮ್ಮ ಮನೆದೇವತೆ ಚಾಮುಂಡೇಶ್ವರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದರು. ಆಳರಸರ ಕುಲದೇವತೆ ಎಂದಮೇಲೆ ಕೇಳಬೇಕೆ ಚಾಮುಂಡೇಶ್ವರಿ ದೇವಿ ನಾಡಿನ ಪವಿತ್ರ ಹಾಗೂ ಶಕ್ತಿ ದೇವತೆ ಎನಿಸಿಕೊಂಡಿತು. ಹಾಗಾದರೆ 13ನೇ ಶತಮಾನಕ್ಕೂ ಮೊದಲು ಇಲ್ಲಿ ಏನಿತ್ತು. ಯಾವುದು ಪ್ರಸಿದ್ಧಿ ಪಡೆದಿತ್ತು ಎಂಬ ಪ್ರಶ್ನೆ ಏಳುತ್ತದೆ.

ಚಾಮುಂಡಿಬೆಟ್ಟ ಎಂದು ಹೆಸರು ಬರುವುದಕ್ಕೆ ಮೊದಲು ಇದನ್ನು ಮಹಾಬಲಗಿರಿ, ಮಹಾಬಲಾದ್ರಿ ಎಂದು ಕರೆಯಲಾಗುತ್ತಿತ್ತು. ಅದಕ್ಕೆ ಕಾರಣ ಚಾಮುಂಡೇಶ್ವರಿ ದೇವಾಲಯದ ಮಗ್ಗುಲಲ್ಲೇ ಇರುವ ಮಹಾಬಲೇಶ್ವರ ದೇವಾಲಯ. ಬೆಟ್ಟಕ್ಕೆ ಬರುವ ಬಹಳಷ್ಟು ಪ್ರವಾಸಿಗರಿಗೆ, ಭಕ್ತರಿಗೆ ಮಹಾಬಲೇಶ್ವರ ದೇವಾಲಯದ ಬಗ್ಗೆ ಮಾಹಿತಿಯೇ ಇಲ್ಲ. ಅಷ್ಟರ ಮಟ್ಟಿಗೆ ಚಾಮುಂಡೇಶ್ವರಿ ತನ್ನ ಪ್ರಭಾವವನ್ನು ಬೆಳಸಿಕೊಂಡಿದ್ದಾಳೆ.

ಮೈಸೂರಿನ ಪುರಾತನ ದೇವಾಲಯ ಎಂದೇ ಹೆಸರು ಗಳಿಸಿರುವ ಈ ಮಹಾಬಲೇಶ್ವರ ದೇವಾಲಯವನ್ನು ತಲಕಾಡಿನ ಗಂಗರು ಸ್ಥಾಪಿಸಿದರು. ಕ್ರಿ.ಶ. 950ರಲ್ಲಿ ಸ್ಥಾಪನೆಗೊಂಡ ಈ ದೇವಾಲಯ ದಕ್ಷಿಣ ಪ್ರಸಿದ್ಧ ಶಿವಕ್ಷೇತ್ರವಾಗಿತ್ತು. ನಂತರ ಹೊಯ್ಸಳ ರಾಜರು ಇದನ್ನು ಅಭಿವೃದ್ಧಿ ಪಡಿಸಿದರು. ಅದರಲ್ಲೂ ಹೊಯ್ಸಳ ರಾಜ ವಿಷ್ಣುವರ್ಧನನು ದೇವಾಲಯದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದನು.ಕಾಲಾನುಕ್ರಮದಲ್ಲಿ ಈ ದೇವಾಲಯ ಅಭಿವೃದ್ಧಿಗೊಂಡಿತಾದರೂ ಪ್ರಸಿದ್ಧಿ ಪಡೆಯಲು ಸಾಧ್ಯವಾಗಲಿಲ್ಲ.

ಮುಂದೆ ಮಹಾಬಲಾದ್ರಿ ಎಂಬ ಹೆಸರೇ ಇಲ್ಲದಂತಾಗಿ ಚಾಮುಂಡಿಬೆಟ್ಟ ಎಂಬ ಹೆಸರು ಬಂತು. ಮಹಿಷಾಸುರ, ಮೈಸೂರು ಎಂಬ ಹೆಸರಿಗೂ ಚಾಮುಂಡೇಶ್ವರಿ ಪುರಾಣಕ್ಕೂ ತಳುಕುಹಾಕಿಕೊಂಡ ಕಾರಣದಿಂದ ಈ ಹೆಸರು ಹೆಚ್ಚು ಸಮೀಪವಾಗಿ ಜನರಿಗೆ ಕಂಡಿತು. ದೇವಿ ಪ್ರಭಾವ ಜನರ ಮೇಲೆ ಗಾಢವಾದದ್ದೂ ಇದಕ್ಕೆ ಕಾರಣವಿರಬಹುದು.