ಬಡವರ ಬಜಾರ್ ‘ಒಂದೂವರಾಣೆ ಗಲ್ಲಿ’ ಎಂಬ ಕನಸು

ಬಡವರ ಬಜಾರ್ ‘ಒಂದೂವರಾಣೆ ಗಲ್ಲಿ’ ಎಂಬ ಕನಸು

ಮೈಸೂರು ನಗರದ ಒಂದೊಂದು ಸ್ಥಳವೂ ಒಂದೊಂದು ಐತಿಹಾಸಿಕ ಘಟನೆಗಳೊಂದಿಗೆ ತಳುಕು ಹಾಕಿಕೊಂಡಿದ್ದು, ತನ್ನ ಐತಿಹಾಸಿಕ ಮಹತ್ವವನ್ನು ಸಾರುತ್ತವೆ. ಇಂತಹ ಸಾಲಿಗೆ `ಒಂದೂವರಾಣೆ’ ಗಲ್ಲಿಯೂ ಸೇರುತ್ತದೆ. ಬಡವರ ದಿನ ನಿತ್ಯದ ಕಾಯಕದ ಸ್ಥಳವಾದರೆ, ಗ್ರಾಹಕರಿಗೆ ದಿನ ನಿತ್ಯದ ಎಲ್ಲಾ ವಸ್ತುಗಳೂ ಒಂದೆಡೆ ಸಿಗುವ ಪುಟ್ಟ ಮಾರುಕಟ್ಟೆಯೂ ಆಗಿ ಗುರುತಿಸಿಕೊಂಡಿತ್ತು.
ಆದರೆ ದಿನಗಳೆದಂತೆ ತನ್ನ ಮಹತ್ವ ಕಳೆದುಕೊಂಡ `ಒಂದೂವರಾಣೆ ಗಲ್ಲಿ’ ಮೈಸೂರು ಮಹಾನಗರ ಪಾಲಿಕೆಯ ಆಡಳಿತದಲ್ಲಿ ಇತಿಹಾಸದ ಪುಟ ಸೇರಿಕೊಂಡಿದೆ. ಒಂದು ಕಾಲದಲ್ಲಿ ಬಡವರ ಬಜಾರ್ ಆಗಿದ್ದ, ಸಣ್ಣಪುಟ್ಟ ವ್ಯಾಪಾರಸ್ತರಿಗೆ ಆಶ್ರಯ ತಾಣವಾಗಿದ್ದ ಇಲ್ಲಿ ಬದುಕಿನಲ್ಲಿ ಎಲ್ಲವೂ ಮುಗಿದು ಹೋಗಿದೆ ಎಂಬ ವ್ಯಕ್ತಿ ಕೂಡ ಈ ಗಲ್ಲಿಯಲ್ಲಿ ಒಂದು ಚಿಕ್ಕ ಅಂಗಡಿ ಇಟ್ಟಕೊಂಡು ಹೊಟ್ಟೆ ಹೊರೆದುಕೊಳ್ಳುತ್ತಿದ್ದರು. ಆಧುನಿಕ ಭರಾಟೆಯಲ್ಲಿ ಒಂದುವರಾಣೆ ಗಲ್ಲಿ ಇಲ್ಲಿ ಇತ್ತಾ? ಎಂದು ಅನುಮಾನ ಪಡುವಷ್ಟು ಹೇಳ ಹೆಸರಿಲ್ಲದಂತೆ ಮಾಯವಾಗಿರುವುದು ನೋವಿನ ಸಂಗತಿ.


ಇತಿಹಾಸ: ಒಂದುವರಾಣೆ ಗಲ್ಲಿ ಇತಿಹಾಸವೆ ಅಚ್ಚರಿ ಉಂಟುಮಾಡುವಂತದ್ದು. 1799 ರಲ್ಲಿ ಟಿಪ್ಪು ಆಳ್ವಿಕೆ ಅಂತ್ಯಗೊಂಡು ಮುಮ್ಮಡಿ ಕೃಷ್ಣರಾಜ ಒಡೆಯರ್ ಪಟ್ಟಕ್ಕೆ ಬಂದಾಗ ಅರಮನೆಯ ಆವರಣದಲ್ಲಿ ವಸತಿ ಸಮುಚ್ಚಯವೂ ಇತ್ತು. ಮೈಸೂರು ಅರಮನೆಗೆ ಕಾವೇರಿ ನೀರು ತರಲು ದಿವಾನ್ ಪೂರ್ಣಯ್ಯ ಬಲಮುರಿಯಿಂದ ಅರಮನೆಗೆ ನಾಲೆ ತೆಗೆಸಿದರು. ಈಗಿನ ಸಯ್ಯಾಜಿರಾವ್ ರಸ್ತೆ ಆಗ 40 ಅಡಿ ಆಳದ ನಾಲೆಯಾಗಿತ್ತು.
ಈ ನಾಲೆಗೆ ಜಾಗ ಬಿಟ್ಟು ಕೊಟ್ಟಿದ್ದರಿಂದ ಮಾರುಕಟ್ಟೆ ಸ್ಥಳ ಇಕ್ಕಟ್ಟಾಯಿತು. ಇದರಿಂದ ದೇವರಾಜ ಮಾರುಕಟ್ಟೆ ಎದುರಿನ ಭಾಗದಲ್ಲಿ ಒಂದು ಬೀದಿ ಬದಿ ವ್ಯಾಪಾರ ಆರಂಭವಾಯಿತು. ಇಲ್ಲಿ ಒಂದುವರಾಣೆಗೆ ಎಲ್ಲ ವಸ್ತುಗಳು ದೊರಕಲಾರಂಭಿಸಿದವು. ಮುಖ್ಯವಾಗಿ ಕಡಿಮೆ ಬೆಲೆಯಲ್ಲಿ ಬಡವರಿಗೆ ದಿನನಿತ್ಯದ ವಸ್ತುಗಳು ದೊರಕುತ್ತಿದ್ದರಿಂದ ಬಡ ಬಗ್ಗರು ದಿನಂಪ್ರತಿ ಒಂದೂವರಾಣೆ ಗಲ್ಲಿಗೆ ಹೋಗಿ ತಮಗೆ ಬೇಕಾದ ವಸ್ತುಗಳನ್ನು ತರುತ್ತಿದ್ದರು.
ನಗರ ಮಾತ್ರವಲ್ಲದೇ ಹಳ್ಳಿಗಳಿಂದಲೂ ಇಲ್ಲಿಗೆ ದಿನಂಪ್ರತಿ ಬಳಸುವ ವಸ್ತುಗಳ ಖರೀದಿಗಾಗಿ ಬರುತ್ತಿದ್ದರು. ವಿದ್ಯಾರ್ಥಿಗಳು ಪುಸ್ತಕಗಳು ಅಗ್ಗದ ಬೆಲೆಯಲ್ಲಿ ಸಿಗುತ್ತವೆ ಎಂದು ಈ ಗಲ್ಲಿಗೆ ಬರುತ್ತಿದ್ದರೆ, ವ್ಯಾಪಾರಿಗಳಿಗೆ ಹೆಚ್ಚು ಗ್ರಾಹಕರು ಸಿಗುತ್ತಾರೆ ಎಂದು ಈ ಗಲ್ಲಿಯ ಕಡೆ ಮುಖ ಮಾಡುತ್ತಿದ್ದರು. ಇಲ್ಲಿ ಪಾತ್ರೆಗಳೂ, ಬಟ್ಟೆಗಳು, ಹಣ್ಣು ಸೇರಿದಂತೆ ಎಲ್ಲವೂ  ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದವು.
ಬೆಳಗ್ಗೆ ವ್ಯಾಪಾರ ಪ್ರಾರಂಭವಾಗಿ ಸೂರ್ಯ ಮುಳುಗುವ ಹೊತ್ತಿಗೆ ಮುಕ್ತಾಯವಾಗುತ್ತಿತ್ತು. ಆಗಿನ ಲೆಕ್ಕಾಚಾರದಲ್ಲಿ 16 ಆಣೆ ಸೇರಿದರೆ 1 ರೂ. ಆಗುತ್ತಿತ್ತು. 1 ಆಣೆ ಆರೂಕಾಲು ಪೈಸೆಗೆ ಸಮ. ಈ ಮಾಳದಲ್ಲಿ ಯಾವುದೇ ವಸ್ತು ಒಂದೂವರಾಣೆಗೆ ಸಿಗುತ್ತಿದ್ದ ಕಾರಣ ಬಾಯಿಂದ ಬಾಯಿಗೆ ಹಬ್ಬಿ ಕ್ರಮೇಣ ಈ ಪ್ರದೇಶ ‘ಒಂದೂವರಾಣೆ ಗಲ್ಲಿ’ ಎಂದು ಕರೆಯಲ್ಪಟ್ಟಿತ್ತು.
ಇಂತಹ ಭವ್ಯ ಇತಿಹಾಸ ಹೊಂದಿದ್ದ ಒಂದೂವರಾಣೆ ಗಲ್ಲಿ ಈಗ ನಾಮಾವಶೇಷವಾಗಿದೆ. 2006 ರಲ್ಲಿ ನಗರ ಪಾಲಿಕೆಯು ಒಂದು ನಿರ್ಣಯ ಕೈಗೊಂಡು ಮಕ್ಕಾಜಿ ಚೌಕದಲ್ಲಿ 3 ಲಕ್ಷ 40 ಸಾವಿರ ಚದರ ಅಡಿ ಜಾಗವನ್ನು ಮಾವರ್ಿಕ್ ಹೋಲ್ಡಿಂಗ್ಸ್ ಮತ್ತು ಇನ್ವೆಸ್ಟ್ಮೆಂಟ್ಗೆ 40 ವರ್ಷಗಳಿಗೆ ಗುತ್ತಿಗೆ ನೀಡಿದೆ. ಈ ಒಪ್ಪಂದದ ವ್ಯಾಪ್ತಿಗೆ ಬರುವ ಒಂದವರಾಣೆ ಗಲ್ಲಿಯಲ್ಲಿದ್ದ ಹಲವು ಮಳಿಗೆಗಳನ್ನು ಕೆಡವಿ ಇತಿಹಾಸ ಪುಟಕ್ಕೆ ಸೇರಿಸಲಾಗಿದೆ. ಈಗ ಇಲ್ಲಿರುವುದು ಒಂದುವರಾಣೆ ಗಲ್ಲಿಯ ನೆನಪುಮಾತ್ರ.