Breaking News

ಮೈಸೂರಿನ ನೆಲದಲ್ಲಿ ಆ ‘ಮಹಾಗುರು’ವಿನ ನೆನಪು ಹರಿದಾಡಿದೆ!

ಮೈಸೂರಿನ ನೆಲದಲ್ಲಿ ಆ ‘ಮಹಾಗುರು’ವಿನ ನೆನಪು ಹರಿದಾಡಿದೆ!

ಇಂದು ಶಿಕ್ಷಕರ ದಿನ. ಭಾರತದ ರಾಷ್ಟ್ರಪತಿಯಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬದ ನೆನಪಿಗಾಗಿ ದೇಶಾದ್ಯಂತ ಇಂದು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಆದರ್ಶ ಶಿಕ್ಷಕರಾಗಿದ್ದ ರಾಧಾಕೃಷ್ಣನ್ ಅವರು ಮೊದಲು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಮೈಸೂರಿನಲ್ಲಿ ಎಂಬ ವಿಚಾರ ಬಹಳ ಜನರಿಗೆ ಗೊತ್ತಿಲ್ಲ. ಅವರು ಮೈಸೂರಿನಿಂದ ಹೋಗುವಾದ ಅವರ ಶಿಷ್ಯವೃಂದ ಸತ್ಕರಿಸಿದ ರೀತಿ ಅಪೂರ್ವವಾದುದು. ಯಾವುದೇ ಗುರು ತನ್ನ ಜೀವಮಾನದಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಸ್ಮರಣೆಯದು.

ಹೌದು, ರಾಧಾಕೃಷ್ಣನ್ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಆಗ ಮಹಾರಾಜ ಕಾಲೇಜಿನಲ್ಲೇ ಎಲ್ಲ ತರಗತಿಗಳೂ ನಡೆಯುತ್ತಿದ್ದ ಕಾಲ. 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಆರಂಭಗೊಂಡಿತು. 1918ರಲ್ಲಿ ತತ್ವಶಾಸ್ತ್ರ ವಿಭಾಗಕ್ಕೆ ಪ್ರಾಧ್ಯಾಪಕರಾಗಿ ನೇಮಕಗೊಂಡವರು ರಾಧಾಕೃಷ್ಣನ್ ಅವರು.

ತೆಲಗು ಕುಟುಂಬವೊಂದರಲ್ಲಿ 188ರ ಸೆಪ್ಟಂಬರ್ 5ರಂದು ಜನಿಸಿದ ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ 17ನೇ ವಯಸ್ಸಿಗೆ ಪದವಿ ಪಡೆದರು. 1906ರಲ್ಲಿ ಸ್ನಾತಕಕೋತ್ತರ ಪದವಿ ಪಡೆದ ಅವರಿಗೆ ಮದ್ರಾಸ್ ರೆಸಿಡೆನ್ಸಿ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ಸಿಕ್ಕಿತು. ನಂತರ 1918ರಲ್ಲಿ ಅವರು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿ ನೇಮಕಗೊಂಡರು.

 

1921ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾನಿಯದಲ್ಲಿ ಮಾನಸಿಕ ಹಾಗೂ ನೈತಿಕ ವಿಜ್ಞಾನ ಪೀಠದ ಪ್ರಾಧ್ಯಾಕ ಹುದ್ದೆಗೆ ಇವರಿಗೆ ಆಹ್ವಾನ ಸಿಕ್ಕಿತು. ಕಿಂಗ್ ಜಾರ್ಜ್ ಅವರು ಅಲಂಕರಿಸಿದ್ದ ಸ್ಥಾನವದು. ಆ ಕಾಲಕ್ಕೆ ತತ್ವಶಾಸ್ತ್ರದಲ್ಲಿ ಅತ್ಯಂತ ಪ್ರತಿಷ್ಠಿತ ಹುದ್ದೆ ಅದಾಗಿತ್ತು. ಹಾಗಾಗಿ ರಾಧಾಕೃಷ್ಣನ್ ಅವರ ವರ್ಗಾವಣೆ ಮೈಸೂರಿನ ಅವರ ಸ್ನೇಹಿತರು ಹಾಗೂ ಶಿಷ್ಯರಿಗೆ ದುಃಖದಷ್ಟೇ ಸಂತೋಷವನ್ನೂ ತಂದಿತ್ತು.

ಅಂದು ಬೆಳಗ್ಗೆ ರೈಲುಪಯಾಣಕ್ಕಾಗಿ ರಾಧಾಕೃಷ್ಣನ್ ಅವರು ಸಿದ್ಧತೆ ನಡೆಸುತ್ತಿದ್ದಾಗ ದೊಡ್ಡದೊಂದ ಅಚ್ಚರಿ ಕಾದಿತ್ತು. ಅವರ ಮನೆ ಎದುರು ಸರ್ವಾಲಂಕೃತ ಸಾರೋಟು ಬಂದು ನಿಂತಿತ್ತು. ಅದರ ವೈಭವವನ್ನು ಕಂಡು ರಾಧಾಕೃಷ್ಣನ್ ಬೆಕ್ಕಸ ಬೆರಗಾದರು. ಅದರಲ್ಲಿ ಗುರುಗಳನ್ನು ಕೂರಿಸಿ, ಎಲ್ಲ ಶಿಷ್ಯರೂ ಸೇರಿ ಕುದುರೆ ಬದಲಿಗೆ ತಾವೇ ಸ್ವತಃ ಸಾರೋಟನ್ನು ರೈಲ್ವೇ ನಿಲ್ದಾಣದವರೆಗೆ ಎಳೆದುಕೊಂಡು ಹೋದರು. ಈಗಿನ ಸರಸ್ವತಿಪುರಂ ಫಸ್ಟ್ ಮೇನ್ ನಲ್ಲಿರುವ ವಿಶ್ವವಿದ್ಯಾನಿಲಯದ ಕಟ್ಟಡದಲ್ಲಿ ಅವರು ವಾಸವಾಗಿದ್ದರು. ಅಷ್ಟೂ ದೂರದವರೆಗೆ ಸಾರೋಟನ್ನು ಎಳೆಯುತ್ತಿದ್ದ ಶಿಷ್ಯರು ಗುರುಗಳ ಜಯಘೋಷ ಮಾಡುತ್ತಿದ್ದರು. ದಾರಿಯುದ್ದಕ್ಕೂ ಈ ಸಂಭ‍್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದ ಜನ ಯಾವುದೇ ವೃತ್ತಿ ಮಾಡುವವರಿಗೆ ಇಂತದೊಂದು ದೊಡ್ಡ ಬದುಕು ಸಿಕ್ಕರೆ ಜನ್ಮ ಸಾರ್ಥಕ ಅಂದುಕೊಂಡರು.

 

ಮುಂದೆ ರಾಧಾಕೃಷ್ಣನ್ ಅವರ ತತ್ವಶಾಸ್ತ್ರದಲ್ಲಿ ದೊಡ್ಡ ಹೆಸರು ಸಂಪಾದಿಸಿದರು. ಸ್ವತಂತ್ರ ಭಾರತದ ಮೊದಲ ಉಪರಾಷ್ಟ್ರಪತಿಯಾದರು. ಎರಡನೇ ರಾಷ್ಟ್ರಪತಿಯೂ ಆದರು. ಶಿಕ್ಷಕನೊಬ್ಬ ಒಂದು ದೇಶದ ಸರ್ವೋನ್ನತ ಹುದ್ದೆಯನ್ನು ಅಲಂಕರಿಸಿದ್ದು ಇಡೀ ಶಿಕ್ಷಕ ಸಮುದಾಯಕ್ಕೆ ದೊಡ್ಡ ಹೆಮ್ಮೆಯ ಸಂಗತಿ.

ಅದಕ್ಕಾಗಿ ಭಾರತ ಸರ್ಕಾರ ರಾಧಾಕೃಷ್ಣನ್ ಅವರು ಹುಟ್ಟಿದ ದಿನವನ್ನು ಶಿಕ್ಷಕದಿನವನ್ನಾಗಿ ಆಚರಿಸುವ ಮೂಲಕ ಆ ಮಹಾಗುರುವಿಗೆ ನಮನ ಸಲ್ಲಿಸಿದೆ. ಅವರ ನೆನಪಿಗಾಗಿ ಮೈಸೂರು ವಿಶ್ವವಿದ್ಯಾನಿಲಯ ರಾಧಾಕೃಷ್ಣನ್ ವಾಸವಿದ್ದ ಮನೆಯನ್ನು ತತ್ವಶಾಸ್ತ್ರ ಅಧ್ಯಯನ ಕೇಂದ್ರವನ್ನಾಗಿ ಮಾಡಿ, ಅವರ ಸ್ಮರಣೆಯನ್ನು ಉಳಿಸಿಕೊಂಡಿದೆ.

Leave a Reply

Your email address will not be published.