Breaking News

ಒಂದೂವರೆ ಶತಮಾನದ ಇತಿಹಾಸ ಹೊಂದಿರುವ ‘ಪೊಲೀಸ್ ಬ್ಯಾಂಡ್’!

ಒಂದೂವರೆ ಶತಮಾನದ ಇತಿಹಾಸ ಹೊಂದಿರುವ ‘ಪೊಲೀಸ್ ಬ್ಯಾಂಡ್’!

ದಸರಾ ಮೆರವಣಿಗೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಪೊಲೀಸ್ ಬ್ಯಾಂಡ್. ವಿಶೇಷ ಮತ್ತು ವಿಶಿಷ್ಟ ಸಮವಸ್ತ್ರದಲ್ಲಿ ಜಂಬೂ ಸವಾರಿಯಲ್ಲಿ ಎದ್ದು ಕಾಣುವ ಕನ್ನಡ ಹಾಗೂ ಇಂಗ್ಲಿಷ್ ಬ್ಯಾಂಡ್ ಮೂಲಕ ಚಿರಪರಿಚಿತವಾಗಿರುವ ಪೊಲೀಸ್ ಬ್ಯಾಂಡ್ನ ಇತಿಹಾಸ ಸುಮಾರು ಒಂದೂವರೆ ಶತಮಾನದಷ್ಟು ಹಿಂದಕ್ಕೆ ಸರಿಯುತ್ತದೆ.

ಅಪಾರ ಸಂಗೀತಾಭಿರುಚಿ ಹೊಂದಿದ್ದ ಅಂದಿನ ಅರಸು ಚಾಮರಾಜೇಂದ್ರ ಒಡೆಯರ್ ಅವರು 1868ರಲ್ಲಿ ಅರಮನೆ ಬ್ಯಾಂಡ್ ಸ್ಥಾಪಿಸಿದರು. ಫ್ರಾನ್ಸ್ ದೇಶದ ಡೆಫ್ರಿನ್ ಮೊದಲ ಬ್ಯಾಂಡ್ ಮಾಸ್ಟರ್. ನಾಡಿನ ಅರಸರಿಗೆ ದೇಸಿ ಸಂಗೀತ ಮಾತ್ರವಲ್ಲ, ವಿದೇಶಿ ಸಂಗೀತದ ಅಭಿರುಚಿಯೂ ಇತ್ತು ಎನ್ನುವುದಕ್ಕೆ ಅರಮನೆ ಬ್ಯಾಂಡ್ ಸಾಕ್ಷಿ. 1918 ರಲ್ಲಿ ಅರಮನೆ ಬ್ಯಾಂಡ್ನಿಂದ ಹಲವರನ್ನು ಆರಿಸಿ ಪ್ರತ್ಯೇಕವಾಗಿ `ಕರ್ನಾಟಕ ಬ್ಯಾಂಡ್’ ಕಟ್ಟಿದರು.
1951 ರಲ್ಲಿ ಕರ್ನಾಟಕ ಸರಕಾರ ಕನರ್ಾಟಕ ಬ್ಯಾಂಡ್ ಹಾಗೂ ಇಂಗ್ಲಿಷ್ ಬ್ಯಾಂಡ್ ಎರಡನ್ನೂ ಪೊಲೀಸ್ ಇಲಾಖೆಗೆ ಸೇರ್ಪಡೆಗೊಳಿಸಿ, ಕೆಎಸ್ಆರ್ಪಿ ಅಶ್ವಾರೋಹದಳದ ಸಮಾದೇಷ್ಟರ ಅಧೀನಕ್ಕೆ ನೀಡಿತು. 1958 ರಲ್ಲಿ `ಕರ್ನಾಟಕ ಸರಕಾರ ವಾದ್ಯವೃಂದ’ ಹಾಗೂ `ಕರ್ನಾಟಕ ಸರಕಾರ ಬ್ಯಾಂಡ್’ ಎಂಬುದಾಗಿ ಈ ಎರಡು ತಂಡಗಳಿಗೆ ಮರುನಾಮಕರಣ ಮಾಡಲಾಯಿತು.

ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಪಾಶ್ಚಿಮಾತ್ಯ ಸಂಗೀತದ ವಿವಿಧ ಪ್ರಕಾರಗಳನ್ನು ನುಡಿಸುವ ಪರಿಣತಿ ಹೊಂದಿರುವ ಈ ತಂಡ ನಾಡಹಬ್ಬ ದಸರೆ ಬಿಟ್ಟರೆ, ವಿಧಾನಸೌಧ, ರಾಜಭವನ ಮುಂತಾದೆಡೆ ನಡೆಯುವ ಬಹುಮುಖ್ಯ ಕಾರ್ಯಕ್ರಮಗಳಲ್ಲಿ ಮಾತ್ರ ಸಂಗೀತ ನುಡಿಸುತ್ತದೆ. ರಾಜ್ಯಪಾಲರು, ಮುಖ್ಯಮಂತ್ರಿ ಭಾಗವಹಿಸಿದ್ದ ವಿಶೇಷ ಕಾರ್ಯಕ್ರಮಗಳಲ್ಲಿ ಸಹ ಇವರ ಹಾಜರಿ ಇರುತ್ತದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 45 ಪೊಲೀಸ್ ತಂಡಗಳು ಸಂಗೀತ ನುಡಿಸುತ್ತಾವಾದರೂ ಅವುಗಳು ತಮ್ಮ ದೈನಂದಿನ ಪೊಲೀಸ್ ಕಾಯಕವನ್ನೂ ಜೊತೆಯಲ್ಲಿಯೇ ಮಾಡಬೇಕಾಗುತ್ತದೆ. ಆದರೆ, ಕೇವಲ ಸಂಗೀತಕ್ಕೆ ಮೀಸಲಾಗಿರುವ ತಂಡಗಳೆಂದರೆ, ಅದು ಮೈಸೂರಿನ ಪೊಲೀಸ್ ಬ್ಯಾಂಡ್ ಮಾತ್ರ.
ಎಂ.ಕೆ.ರಾಜೇಂದ್ರ, ಸಿ.ದಾಸ್ ನೇತೃತ್ವದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಈ ಎರಡು ತಂಡಗಳು ದಸರೆಗೆ ಗೀತೆಗಳನ್ನು ನುಡಿಸಲು ಅಣಿಯಾಗುತ್ತಿವೆ. ಇಂಗ್ಲಿಷ್ ತಂಡದಲ್ಲಿ ಒಟ್ಟು 42 ಮಂದಿ, ಕನ್ನಡ ತಂಡದಲ್ಲಿ 35 ಮಂದಿ ಇದ್ದಾರೆ. ಇವರೆಲ್ಲರೂ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತವರಾಗಿದ್ದು ಕನರ್ಾಟಕ ಸೆಕೆಂಡರಿ ಎಜುಕೇಷನ್ ಬೋಡರ್್ನ ಅರ್ಹತಾ ಪರೀಕ್ಷೆ ಉತ್ತೀರ್ಣರಾದವರಾಗಿದ್ದಾರೆ.

ಇಂಗ್ಲೀಷ್ ಬ್ಯಾಂಡ್ನ ವಾದ್ಯಗಾರರು ಅಲ್ಲಾಫೀಗಾರೋ, ಮೈ ರೆಜಿಮೆಂಟ್, ಅಬೈಡ್ ವಿತ್ ಮಿ, ಫೈನಲ್ ಕೌಂಟ್ ಡೌನ್, ಬಿತೋವೆನ್ ಫಿಫ್ತ್ ಮೊದಲಾದ ಜನಪ್ರಿಯ ಗೀತೆಗಳನ್ನು ನುಡಿಸಲಿದ್ದರೆ, ಕನ್ನಡ ಬ್ಯಾಂಡ್ನ ವಾದ್ಯಗಾರರು ತ್ಯಾಗರಾಜರ ಕೀರ್ತನೆಗಳು, ಜಯ ಚಾಮರಾಜೇಂದ್ರ ಒಡೆಯರ್, ವೀಣೆ ಶೇಷಣ್ಣ, ಪಿಟೀಲು ಚೌಡಯ್ಯ ಅವರ ರಚನೆಗಳನ್ನು, ಸಂಯೋಜನೆಗಳನ್ನು ನುಡಿಸುತ್ತಾರೆ. ಮಿಗಿಲಾಗಿ ಮೈಸೂರು ಆಂಥೆಮ್ ಆಗಿದ್ದ `ಕಾಯೌ ಶ್ರೀಗೌರಿ…..’ ರಚನೆ ಇದ್ದೇ ಇರುತ್ತದೆ.

ದಸರೆಯಲ್ಲಿ ಆನೆ ಸಾರೋಟಿನಲ್ಲಿ ಸಾಗುವ ಅವಕಾಶ ಈ ಬ್ಯಾಂಡ್ ತಂಡಕ್ಕಿದೆ. ಮತ್ತೊಂದು ವಿಶೇಷ ಎಂದರೆ, ರಾಜ್ಯದ ನಾನಾ ಭಾಗಗಳಿಂದ ಬರುವ ಎಲ್ಲಾ ಪೊಲೀಸ್ ಬ್ಯಾಂಡ್ ತಂಡಗಳು ದಸರೆಯ ಹಿಂದಿನ ದಿನ ಅರಮನೆ ಅಂಗಳದಲ್ಲಿ ನಡೆಸಿಕೊಡುವ ಸಮೂಹ ಸಂಗೀತ ಕಾರ್ಯಕ್ರಮ ಕಣರ್ಾನಂದಕರ.

Leave a Reply

Your email address will not be published.