Breaking News
ವಿಧಾನಸಭಾ ಕದನ – ನಂಜನಗೂಡು ಕ್ಷೇತ್ರದ ಮಾಹಿತಿ

ವಿಧಾನಸಭಾ ಕದನ – ನಂಜನಗೂಡು ಕ್ಷೇತ್ರದ ಮಾಹಿತಿ

ದಕ್ಷಿಣಕಾಶಿ ಎಂದೇ ಪ್ರಸಿದ್ದವಾಗಿರುವ ನಂಜನಗೂಡು ಕ್ಷೇತ್ರದಲ್ಲಿ ಈ ಬಾರಿ ನಂಜುಂಡೇಶ್ವರ ಯಾರಿಗೆ ಒಲಿಯಲಿದ್ದಾನೆ ಕಾದು ನೋಡಬೇಕಿದೆ.

ಇಲ್ಲಿಯ ವರೆಗೆ ನಂಜನಗೂಡಿನಲ್ಲಿ ನಡೆದಿರುವ ವಿಧಾನಸಭಾ ಚುನಾವಣೆಯ ಸಾರಾಂಶ ಇಲ್ಲಿದೆ ನೋಡಿ :

  1. 1957ರಲ್ಲಿ ನಂಜನಗೂಡಿಗೆ ಚುನಾವಣೆ ಕಾಲಿಟ್ಟಾಗ ಕಾಂಗ್ರೆಸ್‌‌‌ನಿಂದ ಪಿ.ಮಹದೇವಯ್ಯ ಹಾಗೂ ಪಿಎಸ್‌‌ಪಿಯಿಂದ ಬಿಎನ್‌‌ಎಸ್ ಆರಾಧ್ಯ ಸ್ಪರ್ಧಿಸಿದ ನೇರ ಹಣಾಹಣಿಯಲ್ಲಿ 6436 ಮತಗಳಿಂದ ಕಾಂಗ್ರೆಸ್‌‌ ಅಭ್ಯರ್ಥಿಯನ್ನು ಮತದಾರರು ಗೆಲುವಿನ ದಡ ಸೇರಿಸಿದರು. ಆರಾಧ್ಯ 8955 ಮತ ಗಳಿಸಿದರೆ, ಮಹದೇವಯ್ಯ 15391 ಮತಗಳಿಂದ ಗೆದ್ದು ಬೀಗಿದರು.
  2. 1962ರಲ್ಲಿ ನಡೆದ ಚುನಾವಣೆ ಅಖಾಡದಲ್ಲಿ ಕಾಂಗ್ರೆಸ್‌‌ ಅಭ್ಯರ್ಥಿ ಎನ್.ರಾಚಯ್ಯ 14855 ಮತ ಗಳಿಸಿದರೆ, ಪಕ್ಷೇತರ ಅಭ್ಯರ್ಥಿ ಎಲ್.ಶ್ರೀಕಂಠಯ್ಯ 12070 ಮತ ಗಳಿಸಿ 2785 ಮತಗಳ ಅಂತರದಿಂದ ಸೋಲಿನ ಕಹಿ ಅನುಭವಿಸಿದರು.
  3. 1967ರಲ್ಲಿ ಪಕ್ಷೇತರ ಅಭ್ಯರ್ಥಿ ಎಲ್.ಶ್ರೀಕಂಠಯ್ಯನ ಕೈ ಹಿಡಿದ ಮತದಾರರು 4092 ಮತಗಳ ಅಂತರದಿಂದ ಗೆಲುವಿನ ಹಾರ ಹಾಕಿದರು. ಕಾಂಗ್ರೆಸ್‌‌ನ ಎನ್. ರಾಚಯ್ಯ 8695 ಮತ ಗಳಿಸಿದರೆ, ಎಲ್.ಶ್ರೀಕಂಠಯ್ಯ 12787 ಮತ ಪಡೆದುಕೊಂಡರು.
  4. 1972ರಲ್ಲಿ ಕಾಂಗ್ರೆಸ್‌‌ ಅಭ್ಯರ್ಥಿ ಕೆ.ಬಿ.ಶಿವಯ್ಯನ ಕೈ ಹಿಡಿದ ಮತದಾರರು, ಪಕ್ಷೇತರ ಅಭ್ಯರ್ಥಿ ಎಲ್.ಶ್ರೀಕಂಠಯ್ಯನ ಕೈಬಿಟ್ಟರು. ಶಿವಯ್ಯ 16334 ಮತ ಗಳಿಸಿದರೆ, ಶ್ರೀಕಂಠಯ್ಯ 9212 ಮತ ಗಳಿಸಿದರು.
  5. 1978ರಲ್ಲಿ ಕಾಂಗ್ರೆಸ್‌‌‌ನಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಕಾಂಗ್ರೆಸ್‌‌ ಬಂಡಾಯವಾಗಿ ಚುನಾವಣೆಗೆ ನಿಂತ ಕೆ.ಬಿ.ಶಿವಯ್ಯ, ಜೆಎನ್‌‌ಪಿ ಪಕ್ಷದ ಪುಟ್ಟವೀರ ತಾರಕ್ ವಿರುದ್ಧ 6785 ಮತಗಳ ಅಂತರದಿಂದ ಗೆಲುವು ಕಂಡರು. ಪುಟ್ಟವೀರ 12854 ಮತ ಗಳಿಸಿದರೆ, ಶಿವಯ್ಯ 19639 ಮತ ಗಳಿಸಿದರು.
  6. ಸಂಘಟನೆಗಳ ಮೂಲಕ ಹೆಸರಾಗಿದ್ದ ಎಂ.ಮಹದೇವ್(ಬೆಂಕಿ ಮಹದೇವ್) ಅವರಿಗೆ ಕಾಂಗ್ರೆಸ್‌‌ 1983ರಲ್ಲಿ ಟಿಕೆಟ್‌ ನೀಡಿತು. ಮಹದೇವ್ ಕೇವಲ 45 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿ ವಿಧಾನಸೌಧದ ಮೆಟ್ಟಿಲು ಹತ್ತಿದರು. ಅಂದು ಎದುರಾಳಿಯಾಗಿ ಸ್ಪರ್ಧಿಸಿದ ಜೆಎನ್‌‌‌ಪಿ ಪಕ್ಷದ ಕೆ.ನರಸೇಗೌಡ 19079 ಮತಗಳಿಸಿದರೆ, ಎಂ.ಮಹದೇವ್ 19124 ಮತ ಗಳಿಸಿ ನಂಜುಂಡೇಶ್ವರನಿಗೆ ಗೆಲುವು ಅರ್ಪಿಸಿದರು.
  7. ಇನ್ಸ್‌‌ಪೆಕ್ಟರ್‌‌ ವೃತ್ತಿಯಲ್ಲಿದ್ದ ಡಿ.ಟಿ.ಜಯಕುಮಾರ್ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿ 1985ರಲ್ಲಿ ಜೆಎನ್‌ಪಿ ಪಕ್ಷದಿಂದ ಮೊದಲ ಪ್ರಯತ್ನದಲ್ಲೇ 4262 ಮತಗಳಿಂದ ಜಯಶಾಲಿಯಾದರು. ಎದುರಾಳಿ ಎಂ.ಲಿಂಗಣ್ಣ 25382 ಮತ ಗಳಿಸಿದರೆ, ಜಯಕುಮಾರ್ 29644 ಮತ ಪಡೆದರು. 1989ರಲ್ಲಿ ಜೆಡಿ ಪಕ್ಷದಿಂದ ಸ್ಪರ್ಧಿಸಿದ ಜಯಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಎಂ.ಮಹದೇವು ವಿರುದ್ಧ 12651 ಮತಗಳ ಅಂತರದಿಂದ ಸೋಲನ್ನು ಕಂಡರು. ಮಹದೇವು 36176 ಮತ ಗಳಿಸಿದರೆ, ಜಯಕುಮಾರ್ 23525 ಮತ ಗಳಿಸಿದರು.
  8. 1994ರಲ್ಲಿ ಜೆಡಿ ಇಂದ ಡಿ.ಟಿ.ಜಯಕುಮಾರ್ ಹಾಗೂ ಕಾಂಗ್ರೆಸ್‌ನಿಂದ ಎಂ.ಮಹದೇವು ಎದುರು ಬದುರಾಗಿ ನಿಂತು ಗೆಲುವಿಗಾಗಿ ಸಾಕಷ್ಟು ಹೋರಾಟ ನಡೆಸಿದರು. ಆದರೆ, ಮತದಾರರು ಮತ್ತೆ ಜಯಕುಮಾರ್‌‌ಗೆ ಗೆಲುವಿನ ಕಾಣಿಕೆ ನೀಡಿದರು. ಜಯಕುಮಾರ್ 56513 ಮತ ಗಳಿಸಿದರೆ, ಮಹದೇವು 27097 ಮತ ಪಡೆದು 29416 ಮತಗಳ ಅಂತರದಿಂದ ಮುಖಭಂಗ ಅನುಭವಿಸಿದರು.
  9. 1999ರಲ್ಲಿ ಕಾಂಗ್ರೆಸ್ ಎಂ.ಮಹದೇವು ಹಾಗೂ ಜೆಡಿಎಸ್‌‌ನಿಂದ ಸ್ಪರ್ಧಿಸಿದ ಡಿ.ಟಿ.ಜಯಕುಮಾರ್‌‌ ಹೋರಾಟದಲ್ಲಿ ಮತದಾರರು ಮಹದೇವ್‌‌ಗೆ ಗೆಲುವಿನ ದಡ ಸೇರಿದರು. ಮಹದೇವ 34701 ಮತ ಗಳಿಸಿದರೆ, ಜಯಕುಮಾರ್ 26703 ಮತ ಗಳಿಸಿದರು. 2004ರಲ್ಲಿ ಜೆಡಿಎಸ್‌‌ಗೆ ಅವಕಾಶ ಕೊಟ್ಟ ಮತದಾರರು ಅಭ್ಯರ್ಥಿ ಟಿ.ಡಿ.ಜಯಕುಮಾರ್ ಗೆಲುವು ಕೊಟ್ಟರು. ಜಯಕುಮಾರ್ 46068 ಮತಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಮಹದೇವು 26483 ಮತಗಳಿಂದ ಪರಾಭವಗೊಂಡರು.
  10. ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ನಂಜನಗೂಡ ಕ್ಷೇತ್ರವನ್ನು 2008ರಲ್ಲಿ ಮೀಸಲಾತಿಗೆ ತಂದ ಹಿನ್ನೆಲೆಯಲ್ಲಿ ವಿ.ಶ್ರೀನಿವಾಸ್ ಪ್ರಸಾಸ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಎಸ್.ಮಹದೇವಯ್ಯ ವಿರುದ್ಧ 708 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಮಹದೇವಯ್ಯ 42159 ಮತ ಗಳಿಸಿದರೆ, ಶ್ರೀನಿವಾಸ್‌‌ಪ್ರಸಾದ್ 42867 ಮತ ಗಳಿಸಿದರು. ನಂತರ 2013ರಲ್ಲಿ ಕಾಂಗ್ರೆಸ್‌‌ನಿಂದ ಸ್ಪರ್ಧಿಸಿದ ವಿ.ಶ್ರೀನಿವಾಸ್ ಪ್ರಸಾದ್ 50784 ಮತಗಳಿಸಿದರೆ, ಜೆಡಿಎಸ್‌ನಿಂದ ಸ್ಪರ್ಧಿಸಿದ ಕಳಲೆ ಎನ್.ಕೇಶವಮೂರ್ತಿ 41843 ಮತ ಗಳಿಸಿ 8941 ಮತಗಳ ಅಂತರದಿಂದ ಸೋಲನ್ನು ಕಂಡರು.
  11.  ಕಂದಾಯ ಸಚಿವ ಸ್ಥಾನದಿಂದ ಕೈಬಿಟ್ಟರು ಎಂಬ ಕಾರಣಕ್ಕೆ ಮನನೊಂದ ಶ್ರೀನಿವಾಸ್‌‌ ಪ್ರಸಾದ್‌‌, 2016ರಲ್ಲಿ ಕಾಂಗ್ರೆಸ್‌‌ಗೆ ಗುಡ್‌ಬೈ ಹೇಳಿ, ಬಿಜೆಪಿ ಸಖ್ಯ ಬೆಳೆಸಿದರು. ಉಪ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಜೆಡಿಎಸ್‌‌ನಲ್ಲಿ ಪ್ರಬಲವಾಗಿ ಗುರುತಿಸಿಕೊಂಡಿದ್ದ ಕಳಲೆ ಕೇಶವಮೂರ್ತಿಯನ್ನು ಕಾಂಗ್ರೆಸ್‌‌ ಕರೆದುಕೊಂಡು ಬಂದು ಗೆಲುವಿನ ಕಾಣಿಕೆ ನೀಡಿತು.

 

ನಂಜನಗೂಡು ಕ್ಷೇತ್ರದಲ್ಲಿ ನಂಜುಡೇಶ್ವರನಿಗೆ ಒಮ್ಮೆಯೂ ಕಮಲಾ ಅರ್ಪಿಸಿಲ್ಲ, ಈ ಬಾರಿಯ 2018 ಚುನಾವಣೆಯಲ್ಲಿ ಮತದಾರರು ಯಾರಿಗೆ ಕಾಣಿಕೆ ನೀಡುತ್ತಾರೆ ಕಾದು ನೋಡಬೇಕಿದೆ.

Leave a Reply

Your email address will not be published.