Breaking News
ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ- ೧

ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ- ೧

ಮೈಸೂರು ಅರಸರ ಮೂಲ ಪುರುಷರು ಎಂದು ಗುರುತಿಸಲಾಗಿರುವ ಯದುರಾಯ ಮತ್ತು ಕೃಷ್ಣರಾಯ ಉತ್ತರ ಭಾರತದಿಂದ ಬಂದವರು. ಮೂಲತಃ ದ್ವಾರಕಾಪಟ್ಟಣದ ರಾಜದೇವ ಎಂಬವರ ಮಕ್ಕಳಾದ  ಇವರು ಪುರಾಣಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಯಾದವಗಿರಿ(ಮೇಲುಕೋಟೆ)ಗೆ ಬರುತ್ತಾರೆ. ಅಪಾರ ದೈವಭಕ್ತರಾಗಿದ್ದ ಸೋದರರು ತಮ್ಮ ಮನೆ ದೇವರಾದ ಚಲುವನಾರಾಯಣಸ್ವಾಮಿಯ ದರ್ಶನಕ್ಕಾಗಿ ಮೇಲುಕೋಟೆಗೆ ಬಂದು ಅಲ್ಲಿಂದ ಮಹಿಶೂರಿಗೆ ಭೇಟಿ ನೀಡುತ್ತಾರೆ. ಮಹಿಶೂರಿನ ಮಹಬಲಾದ್ರಿ(ಇಂದಿನ ಚಾಮುಂಡಿಬೆಟ್ಟ)ದ ಪರಿಸರಕ್ಕೆ ಮಾರುಹೋಗಿ ಕೆಲ ಕಾಲ ಇಲ್ಲೇ ನೆಲಸಲು ನಿರ್ಧರಿಸುತ್ತಾರೆ.

ಒಂದು ದಿನ ಬೆಟ್ಟದ ಮೇಲಿರುವ ಮಹಾಬಲೇಶ್ವರನ ದರ್ಶನ ಪಡೆದು ದೊಡ್ಡ ಕೆರೆಯ ಕೋಡಿ ಬಳಿಇರುವ ಕೋಡಿ ಭೈರವೇಶ್ವರ ದೇಗುಲದ ಬಳಿ ವಿಶ್ರಾಂತಿಗಾಗಿ ಕೂರುತ್ತಾರೆ. ಅಲ್ಲಿ ಬಟ್ಟೆ ಒಗೆಯುತ್ತಿದ್ದ ಹೆಂಗಸರ ಮಾತು ಅಕಸ್ಮಾತ್ತಾಗಿ ಇವರ ಕಿವಿಗೆ ಬೀಳುತ್ತದೆ. ಸಮೀಪದಲ್ಲಿರುವ ಯದುನಾಡು (ಹದಿನಾಡು ನಂತರ ಹದಿನಾರಾಯಾಯಿತು) ಎಂಬಲ್ಲಿ ಪಾಳೇಗಾರನಾಗಿದ್ದ ಚಾಮರಾಜ ಎಂಬಾತನಿಗೆ ಗಂಡುಮಕ್ಕಳು ಇರಲಿಲ್ಲ. ಆತನ ಆಕಸ್ಮಿಕ ಮರಣ ಹೊಂದಿದ್ದನು. ಈ ಚಾಮರಾಜನು ಮೂಲತಃ ಯಮುನಾ ನದಿ ತೀರದ ಮಥುರಾ ನಗರದಿಂದ ಬಂದು ಇಲ್ಲಿ ನೆಲೆಸಿದ್ದನು ಎನ್ನಲಾಗುತ್ತಿತ್ತು.

ಚಾಮರಾಜನ ಮರಣಾನಂತರ ಆತನ ಪತ್ನಿ ಹಾಗೂ ಮಗಳು ದೇವಾಜಮ್ಮಣ್ಣಿ ಅಲ್ಲಿ ವಾಸವಾಗಿದ್ದರು. ಇದನ್ನು ಅರಿತ ಹದಿನಾರು ಸಮೀಪದ ಕಾರುಗಳ್ಳಿ ಎಂಬಲ್ಲಿನ ದಳವಾಯಿ ಮಾರ ಎಂಬಾತ ರಾಣಿ ಬಳಿ ಬಂದು ತನ್ನ ಮಗಳನ್ನು ಮದುವೆ ಮಾಡುವಂತೆ ಪೀಡಿಸುತ್ತಿದ್ದ. ಮದುವೇ ಮಾಡದೇ ಹೋದರೆ ಬಲವಂತವಾಗಿ ರಾಜ್ಯ ಹಾಗೂ ಪುತ್ರಿಯನ್ನು ಕಿತ್ತುಕೊಳ್ಳುವುದಾಗಿ ಪೀಡಿಸುತ್ತಿದ್ದ. ಈ ಮಾಹಿತಿಯನ್ನು ಬಟ್ಟೆ ಒಗೆಯುತ್ತಿದ್ದ ಹೆಂಗಸರ ಬಾಯಿಂದ ಕೇಳಿದ ಯದುರಾಯ ಮತ್ತು ಕೃಷ್ಣರಾಯರಿಗೆ ಹದಿನಾರಿನ ರಾಣಿಯ ಸಹಾಯಕ್ಕೆ ನಿಲ್ಲುವ ಮನಸಾಯಿತು. ಅದೇ ಸಮಯಕ್ಕೆ ಪುರೋಹಿತನೊಬ್ಬ ಬಂದು ಸಂಕಷ್ಟದಲ್ಲಿರುವ ರಾಣಿಗೆ ಸಹಾಯ ಮಾಡುವಂತೆ ಸೂಚಿಸುತ್ತಾನೆ. ತಕ್ಷಣ ಹದಿನಾರಿಗೆ ಪ್ರಯಾಣ ಬೆಳಸಿದ ಸೋದರರು, ಮಾರನೊಂದಿಗೆ ಸೆಣಸಾಟ ನಡೆಸಿ ಆತನನ್ನು ಕೊಂದು ಹಾಕುತ್ತಾರೆ. ಸಂಕಷ್ಟದ ಸಂದರ್ಭದಲ್ಲಿ ಸಹಾಯಕ್ಕೆ ಬಂದ ಸೋದರರಲ್ಲಿ ಹಿರಿಯನಾದ ಯದುರಾಯನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಲಾಗುತ್ತದೆ. ನಂತರ ಮೈಸೂರಿಗೆ ಬಂದು ನೆಲಸಿ 1399ರಲ್ಲಿ ಮೈಸೂರು ರಾಜ್ಯದ ಸ್ಥಾಪನೆಗೆ ಈ ಸೋದರರು ಕಾರಣರಾಗುತ್ತಾರೆ.

 

ಮುಂದುವರಿದ ಭಾಗ ನಾಳಿನ ಸಂಚಿಕೆಯಲ್ಲಿ

Leave a Reply

Your email address will not be published.