Breaking News
ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ- ೩

ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ- ೩

ಕೋಡಿ ಭೈರವಸ್ವಾಮಿ ದೇವಾಲಯ

ಮೈಸೂರು ರಾಜರ ಇತಿಹಾಸ ಪ್ರಾರಂಭವಾಗುವುದೇ ಈ ದೇವಾಲಯದಿಂದ. ಮೇಲುನೋಟಕ್ಕೆ ಯಾವ ಕಲಾವಂತಿಕೆಯೂ ಇಲ್ಲದೆ ಬರೀ ಇಟ್ಟಿಗೆ ಗಾರೆ ಗೋಡೆಗಳ ಸಾಮಾನ್ಯ ರೂಪದ ಒಂದು ಸಣ್ಣ ಗುಡಿಯಾಗಿರು ಭೈರವಸ್ವಾಮಿ ಗುಡಿ ಇತಿಹಾಸವನ್ನೆ ತನ್ನ ಮಡಿಲಲ್ಲಿ ತುಂಬಿಕೊಂಡಿದೆ. ಮೈಸೂರು ರಾಜವಂಶದ ಮೂಲಬೇರು ಇದೇ ಗುಡಿಯ ಮುಂಭಾಗ ಉಗಮವಾಯಿತು ಎನ್ನುವುದು ಗಮನಾರ್ಹ.
 ಕ್ರಿ.ಶ.1399 ಕ್ಕೂ ಹಿಂದೆ ಈ ಗುಡಿ ದೇವರಾಯ ಸಾಗರದ ಕೋಡಿಯ ಮೇಲ್ಬಾಗದಲ್ಲಿತ್ತು. ಈ ಕಾರಣದಿಂದಾಗಿ ಇದಕ್ಕೆ ಕೋಡಿ ಭೈರವೇಶ್ವರ ದೇವಸ್ಥಾನ ಎಂದು ಕರೆಯಲ್ಪಟ್ಟಿದೆ. ಇಂದಿನ ದೊಡ್ಡಕೆರೆಯನ್ನೆ ದೇವರಾಯ ಸಾಗರ ಎಂದು ಕರೆಯುತ್ತಿದ್ದರು. ಉತ್ತರದಿಂದ ಬಂದ ಯದುರಾಯ ಮತ್ತು ಕೃಷ್ಣರಾಯ ಇಲ್ಲಿ ವಿಶ್ರಾಂತಿ ಪಡೆದಿದ್ದರು. ಕನಸಿನಲ್ಲಿ ಬಂದ ಚಾಮುಂಡೇಶ್ವರಿ ದೇವಿ ರಾಜ್ಯ ಸ್ಥಾಪಿಸಲು ಪ್ರೇರಣೆಯಾಗಿದ್ದು, ಚಾಮರಾಜನ ಮಗಳನ್ನು ಮದುವೆಯಾಗಿದ್ದು ಈಗ ಇತಿಹಾಸ. ಯದುವಂಶ ಸ್ಥಾಪನೆಗೆ ಇದೊಂದು ಪ್ರೇರಣೆಯಾಗಿದೆ ಎಂಬುದು ಮರೆಯುವಂತಿಲ್ಲ.
ಸಣ್ಣ ದೇವಾಲಯವಾದರೂ ಮೈಸೂರಿನ ಇತಿಹಾದ ದೃಷ್ಠಿಯಿಂದ ಬಹಳ ಮಹತ್ವ ಪಡೆದಿದೆ. ಭೈರವ ವಿಗ್ರಹವು ಸುಮಾರು 1 ಮೀ ಎತ್ತರದಲ್ಲಿದ್ದು ನಾಲ್ಕು ಕೈಗಳಲ್ಲಿ ತ್ರಿಶೂಲ, ಡಮರು, ಖಡ್ಗ ಮತ್ತು ಕತ್ತರಿಸಿದ ರುಂಡವಿದೆ. ಈ ವಿಗ್ರಹದ ಬಲಗಡೆ ಚಾಮರಧಾರಿಣಿಯ ಶಿಲ್ಪವಿದೆ. ಭೈರವ ವಿಗ್ರಹದ ಎಡಗಡೆ ಕುಡುಗೋಲನ್ನು ಬಲಗೈಯನ್ನು ಎತ್ತಿಹಿಡಿದ ಭದ್ರಕಾಳಿಯ ಶಿಲ್ಪವಿದೆ. ದೇಗುಲದ ಮುಂಭಾಗದಲ್ಲಿ ಒಂದು ಬನ್ನಿ ಮರವಿದೆ. ಇದು ಮೈಸೂರು ರಾಜವಂಶದ ಪಾಲಿಗೆ ಅತ್ಯಂತ ಪವಿತ್ರವಾದ ವೃಕ್ಷ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿನೋಡಲು ಸಾಮಾನ್ಯ ಕಟ್ಟಡದಂತೆ ಕಾಣುತ್ತಿದ್ದ ಈ ದೇಗಲುವನ್ನು ಒಡೆದು ಹಾಕುವ ಪ್ರಯತ್ನ ನಡೆಯಿತು. ಆದರೆ ನಾಲ್ವಡಿ ಅವರೇ ಬಂದು ಈ ದೇಗುಲದ ಇತಿಹಾಸವನ್ನು ತಿಳಿದು ತಪ್ಪಿಸಿದರು.

ಮುಂದುವರಿದ ಭಾಗ ನಾಳಿನ ಸಂಚಿಕೆಯಲ್ಲಿ….

Leave a Reply

Your email address will not be published.