Breaking News
ಮಧು ಬಂಗಾರಪ್ಪ ವಿರುದ್ದ ಕುಮಾರ್ ಬಂಗಾರಪ್ಪ ವಾಗ್ದಾಳಿ

ಮಧು ಬಂಗಾರಪ್ಪ ವಿರುದ್ದ ಕುಮಾರ್ ಬಂಗಾರಪ್ಪ ವಾಗ್ದಾಳಿ

ಹಿರಿಯ ರಾಜಕೀಯ ಮುತ್ಸದ್ದಿ ಬಂಗಾರಪ್ಪರ ಹೆಸರಿನಲ್ಲಿ ಪ್ರಚಾರ ನಡೆಸುವುದನ್ನು ಶಾಸಕ ಮಧು ಬಂಗಾರಪ್ಪ ಹಾಗೂ ಗೀತಾ ಶಿವರಾಜ್ ಕುಮಾರ್ ನಿಲ್ಲಿಸಿ ಜೆಡಿಎಸ್ ಪಕ್ಷದ ಹೆಸರಿನಲ್ಲಿ ಪ್ರಚಾರ ಕೈಗೊಳ್ಳಲಿ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿಂದು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನಡೆಸಿದ ದುರ್ಬುದ್ದಿ, ಕೆಟ್ಟ ರಾಜಕೀಯವನ್ನು ಈಗಲೂ ಮುಂದುವರೆಸಿದ್ದಾರೆ. ವ್ಯಾಪಾರಿ ದೃಷ್ಟಿಯಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡರನ್ನು ಮುಂದಿಟ್ಟುಕೊಂಡಿದ್ದಾರೆ ಎಂದು ದೂರಿದರು.

ಅಭಿವೃದ್ದಿಪರವಾಗಿ ಚುನಾವಣೆ ನಡೆಸಬೇಕು. ಆದರೆ ಅದನ್ನು ಬಿಟ್ಟು ವ್ಯಾಪಾರಕ್ಕಾಗಿ ಆರ್.ಎಂ. ಮಂಜುನಾಥ್ ಗೌಡರ ಅಕ್ಕಪಕ್ಕ ಕುಳಿತುಕೊಂಡು ಅವರ ಪರ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಬಂಗಾರಪ್ಪ ಅವರ ಹೆಸರನ್ನು ಬಳಕೆ ಮಾಡುವುದು ಸರಿಯಲ್ಲ. ಜೆಡಿಎಸ್ ಹೆಸರಿನಲ್ಲೇ ಮತ ಯಾಚನೆ ನಡೆಸಲಿ. ಅದಕ್ಕೆ ತಮ್ಮ ಅಭ್ಯಂತರವಿಲ್ಲ ಎಂದರು.

ಎಲ್ಲರೂ ಒಟ್ಟಾಗಿರಬೇಕು ಎಂದು ರಾಜ್ ಕುಮಾರ್ ಕುಟುಂಬ ಪ್ರಯತ್ನ ಮಾಡುತ್ತದೆ. ಆದರೆ ಇಲ್ಲಿ ಕೆಲವರು ಕುಟುಂಬ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ರಾಜ್ ಕುಟುಂಬದಲ್ಲೂ ಹುಳಿ ಹಿಂಡತೊಡಗಿದ್ದಾರೆ. ಕುಮಾರ್ ಬಂಗಾರಪ್ಪ ತಮಗೆ ಅಣ್ಣನೇ ಅಲ್ಲ, ಬಂಗಾರಪ್ಪ ಕುಟುಂಬಕ್ಕೂ ಅವರಿಗೂ ಸಂಬಂಧವಿಲ್ಲ ಎನ್ನುವ ಕೆಟ್ಟ ಭಾವನೆ ಸರಿಯಲ್ಲ ಎಂದರು.

ಬಂಗಾರಪ್ಪ ಅವರ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಸೊರಬದಲ್ಲಿರುವ ಬಂಗಾರಪ್ಪ ಸ್ಮಾರಕವನ್ನು ನಿರ್ಲಕ್ಷಿಸಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಸ್ಮಾರಕವನ್ನು ಅಭಿವೃದ್ದಿಪಡಿಸಲು ಚಿಂತಿಸಲಾಗಿದೆ ಎಂದರು.

ಕಳೆದ ಚುನಾವಣೆ ಸಂದರ್ಭದಲ್ಲಿ ಬಂಗಾರಪ್ಪರ ಹೆಸರನ್ನು ಮುಂದಿಟ್ಟುಕೊಂಡು ಅನುಕಂಪದ ಆಧಾರದ ಮೇಲೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಇದು ನಿಜಕ್ಕೂ ಬೇಸರದ ಮೂಡಿಸುತ್ತದೆ ಎಂದರು.

ಕುಮಾರ್ ಬಂಗಾರಪ್ಪ ಹೆತ್ತ ತಂದೆಯನ್ನೇ ಮಧ್ಯರಾತ್ರಿ ಹೊರಗೆ ಕಳುಹಿಸಿದ್ದರು ಎಂದು ತಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ತಮ್ಮ ತಂದೆ ಹಾಗೂ ತಾಯಿಗೆ ಬ್ಲಾಕ್ ಮೇಲ್ ಮಾಡಿ ಸಂಸಾರದಿಂದ ದೂರ ಮಾಡಿದರು. ಜೊತೆಗೆ ರಾಜಕೀಯವಾಗಿಯೂ ದುರ್ಬಳಕೆ ಮಾಡಿಕೊಂಡಿದ್ಧಾರೆ. ಇಷ್ಟು ದಿನ ಎಲ್ಲವನ್ನು ಸಹಿಸಿಕೊಂಡಿದ್ದೆ. ಕುಟುಂಬದ ವಿಚಾರ ಬಹಿರಂಗವಾಗಬಾರದು. ನಾಲ್ಕು ಗೋಡೆ ಮಧ್ಯೆ ಇರಲಿ ಎಂದುಕೊಂಡಿದ್ದೆ. ಆದರೆ ಮಾನಸಿಕವಾಗಿ ತಮಗೆ ಘಾಸಿ ಮಾಡುತ್ತಿದ್ದಾರೆ. ಹೆತ್ತ ತಂದೆ ತಾಯಿಯನ್ನು ಕಡೆಗಣಿಸುವ ಮಗ ನಾನಲ್ಲ. ಅಂತಹ ಮನಸ್ಥಿತಿ ನನಗಿಲ್ಲ. ತಮ್ಮ ವಿರುದ್ದ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕೀಯವಾಗಿ ತಮ್ಮ ಮಧ್ಯೆ ಏನೇ ಭಿನ್ನಾಭಿಪ್ರಾಯವಿರಲಿ, ಕೌಟುಂಬಿಕವಾಗಿ ನಾವೆಲ್ಲರೂ ಒಂದಾಗಿರಬೇಕು. ಆದರೆ ಇದಕ್ಕೆ ಕೆಲವರು ಆಸ್ಪದ ನೀಡುತ್ತಿಲ್ಲ. ಕುಟುಂಬದ ಮಧ್ಯೆ ಹುಳಿ ಹಿಂಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.

ಶಾಸಕ ಮಧು ಬಂಗಾರಪ್ಪ ನಾಲಿಗೆ ಮೇಲೆ ಹಿಡಿತ ಹೊಂದಬೇಕು. ರಾಜಕೀಯದಲ್ಲಿ ಹಿರಿಯರಾಗಿರುವ ಬಿ.ಎಸ್.ಯಡಿಯೂರಪ್ಪ ಕುರಿತು ಅತ್ಯಂತ ಕೆಟ್ಟ ಪದಗಳನ್ನು ಬಳಕೆ ಮಾಡುತ್ತಿದ್ದಾರೆ. ಇದು ಖಂಡನೀಯ. ಜೊತೆಗೆ ಸಚಿವ ಅನಂತ್ ಕುಮಾರ್ ಹೆಗಡೆಯವರನ್ನೂ ಬಿಟ್ಟಿಲ್ಲ. ರಾಮಚಂದ್ರಾಪುರ ಶ್ರೀಗಳ ಕುರಿತಾಗಿಯೂ ಅತ್ಯಂತ ಕೆಟ್ಟದಾಗಿ ನಾಲಿಗೆ ಹರಿಯಬಿಟ್ಟಿದ್ದಾರೆ. ಇಂತಹವರು ಜೆಡಿಎಸ್ ಶಾಸಕರಾಗಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂದು ಪ್ರಧಾನಿ ಮೋದಿ ರಾಷ್ಟ್ರದ ಜನತೆಯನ್ನು ಒಟ್ಟುಗೂಡಿಸಿಕೊಂಡು ಮುಂದುವರೆಯುತ್ತಿದ್ದಾರೆ. ಅವರ ಕಾರ್ಯವನ್ನು ಮೆಚ್ಚಿ ಹಾಗೂ ಯಡಿಯೂರಪ್ಪ ಅವರ ಆಹ್ವಾನದ ಮೇರೆಗೆ ಬಿಜೆಪಿ ಸೇರ್ಪಡೆಗೊಂಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಚಿವ ಕಾಗೋಡು ತಿಮ್ಮಪ್ಪ ವಿರುದ್ದ ವಾಗ್ದಾಳಿ ನಡೆಸಿದ ಕುಮಾರ್ ಬಂಗಾರಪ್ಪ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಾಗೋಡು ಡಮ್ಮಿ ಮಾಡಿಹಾಕಿದ್ದಾರೆ. ಅವರಿಗೆ ಪಕ್ಷದಲ್ಲಿ ನಿಷ್ಟೆ ಇಲ್ಲ. ಹೀಗಾಗಿಯೇ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ಮುಗಿಸಬೇಕೆಂಬುದೇ ಕಾಗೋಡು ಅವರ ಏಕೈಕ ಗುರಿ. ಅದರಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ನ ಓರ್ವ ಶಾಸಕರೂ ಜಿಲ್ಲೆಯಿಂದ ಆಯ್ಕೆಯಾಗುವುದಿಲ್ಲ. ಇದಕ್ಕೆ ಕಾಗೋಡು ಅವರೇ ಕಾರಣಕರ್ತರಾಗುತ್ತಾರೆ ಎಂದು ಲೇವಡಿ ಮಾಡಿದರು.

Leave a Reply

Your email address will not be published.