Breaking News
ಸಲ್ಮಾನ್ ಜಾಮೀನು ಕುರಿತ ತೀರ್ಪುನ್ನು ನಾಳೆಗೆ ಕಾಯ್ದಿರಿಸಿದ ಕೋರ್ಟ್

ಸಲ್ಮಾನ್ ಜಾಮೀನು ಕುರಿತ ತೀರ್ಪುನ್ನು ನಾಳೆಗೆ ಕಾಯ್ದಿರಿಸಿದ ಕೋರ್ಟ್

ಜೋದ್‍ಪುರ್, ಏ.6- ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷಗಳ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್‍ಖಾನ್ ಜಾಮೀನು ಅರ್ಜಿ ತೀರ್ಪನ್ನು ಜೋದ್‍ಪುರ್ ಸೆಷನ್‍ಕೋರ್ಟ್ ನಾಳೆಗೆ ಕಾಯ್ದಿರಿಸಿದೆ. ಈ ಜಾಮೀನು ಅರ್ಜಿ ಕುರಿತ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವೀಂದ್ರಕುಮಾರ್ ಜೋಷಿ, ಪ್ರಕರಣದ ವಿಚಾರಣೆಯನ್ನು ನಾಳೆಗೆ ಕಾಯ್ದಿರಿಸಿದರು. ಇದಕ್ಕೂ ಮುನ್ನ ಕೋರ್ಟ್‍ನಲ್ಲಿ ವಾದ ಮಂಡಿಸಿದ ಸಲ್ಮಾನ್‍ಖಾನ್ ಪರ ಹಿರಿಯ ವಕೀಲ ಮಹೇಶ್‍ಬೋರಾ, ಈ ಪ್ರಕರಣದಲ್ಲಿ ಸಾಕ್ಷಿಗಳನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದರು. ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ಸಲ್ಮಾನ್ ಈಗಾಗಲೇ ಖುಲಾಸೆಗೊಂಡಿದ್ದಾರೆ. ಅಲ್ಲದೆ, ಈ ಸಂಬಂಧದ ಇತರೆ ಮೂರು ಪ್ರಕರಣಗಳಲ್ಲೂ ಇವರು ನಿರ್ದೋಷಿಯಾಗಿದ್ದಾರೆ ಎಂದು ವಾದ ಮಂಡಿಸಿದರು.

ಈ ಪ್ರಕರಣದಲ್ಲಿ ಲಭಿಸಿದೆ ಎನ್ನಲಾದ ಶಸ್ತ್ರಾಸ್ತ್ರಗಳು ಜೋದ್‍ಪುರದಲ್ಲಿ ಪತ್ತೆಯಾಗಿಲ್ಲ. ಅದು ಮುಂಬೈನಲ್ಲಿ ಪತ್ತೆಯಾಗಿದೆ. ಅಲ್ಲದೆ ಏರ್‍ಗನ್ನನ್ನೇ ಪೊಲೀಸರು ರೈಫಲ್‍ಎಂದು ಪರಿಗಣಿಸಿದ್ದಾರೆ ಎಂಬ ಅಂಶವನ್ನು ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಸಂದೇಹದ ಲಾಭ( ಬೆನಿಫಿಟ್ ಆಫ್ ಡೌಟ್) ಪ್ರಯೋಜನವೂ ಸಲ್ಮಾನ್‍ಖಾನ್‍ಗೆ ಲಭಿಸಬೇಕು. ಈ ಆಧಾರದ ಮೇಲೆ ಅವರಿಗೆ ಜಾಮೀನು ನೀಡಬೇಕು ಎಂದು ವಕೀಲರು ಹೇಳಿದರು.

ವಕೀಲರಿಗೆ ಜೀವಬೆದರಿಕೆ:
ಕೋರ್ಟ್ ವಿಚಾರಣೆಗೂ ಮುನ್ನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಮಹೇಶ್‍ಬೋರಾ, ತಮಗೆ ಕೆಲವು ದುಷ್ಕರ್ಮಿಗಳಿಂದ ಪ್ರಾಣ ಬೆದರಿಕೆ ಇದೆ ಎಂಬ ಸಂಗತಿಯನ್ನು ಬಹಿರಂಗಗೊಳಿಸಿದರು. ಸಲ್ಮಾನ್ ಪರವಾಗಿ ವಾದ ಮಾಡದಂತೆ ಕೆಲವರು ನಮಗೆ ದೂರವಾಣಿ ಕರೆ ಮಾಡಿದ್ದಾರೆ. ಇನ್ನೂ ಹಲವು ಎಸ್‍ಎಂಎಸ್ ಸಂದೇಶ ಮೂಲಕ ತಮಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದರು.

Leave a Reply

Your email address will not be published.