Breaking News
ಕಾಂಗ್ರೆಸ್‌ಗೆ ಹಸ್ತದ ಚಿಹ್ನೆ ಕಳೆದುಕೊಳ್ಳುವ ಭೀತಿ!

ಕಾಂಗ್ರೆಸ್‌ಗೆ ಹಸ್ತದ ಚಿಹ್ನೆ ಕಳೆದುಕೊಳ್ಳುವ ಭೀತಿ!

ಕಾಂಗ್ರೆಸ್‌ ಪಕ್ಷದ ಹಸ್ತ ಚಿಹ್ನೆಯನ್ನು ಪ್ರಶ್ನಿಸಿ ಬಿಜೆಪಿ ಮುಖಂಡರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಚುನಾವಣಾ ಆಯೋಗ ಏಪ್ರಿಲ್‌ 18ರಂದು ನಡೆಸಲಿದೆ. ಕರ್ನಾಟಕ ಚುನಾವಣೆ ಸಮೀಪಿಸುತ್ತಿರುವ ಈ ದಿನಗಳಲ್ಲಿ ಇದು ಮಹತ್ವ ಪಡೆದಿದೆ. ಕಾಂಗ್ರೆಸ್‌ ಪಕ್ಷಕ್ಕೆ ಅಕ್ರಮವಾಗಿ ಈ ಚಿಹ್ನೆಯನ್ನು ಹಂಚಲಾಗಿದೆ. ದೇಹದ ಅಂಗಾಂಗಗಳನ್ನು ಚುನಾವಣಾ ಚಿಹ್ನೆಯಾಗಿ ಬಳಸುವಂತಿಲ್ಲ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ದಿಲ್ಲಿ ಬಿಜೆಪಿ ಮುಖಂಡ ಅಶ್ವಿನಿ ಉಪಧ್ಯಾಯ ಅವರು ಜನವರಿ 29ರಂದು ಅರ್ಜಿ ಸಲ್ಲಿಸಿದ್ದರು.

‘ಮತದಾನದ ದಿನ ಮತಗಟ್ಟೆಯ 100 ಮೀ. ಒಳಗೆ ಯಾವುದೇ ಪಕ್ಷದ ಚಿಹ್ನೆಯನ್ನು ಪ್ರದರ್ಶಿಸುವಂತಿಲ್ಲ. ಆದರೆ ಕಾಂಗ್ರೆಸ್‌ ಪಕ್ಷದ ಚಿಹ್ನೆಯಾದ ಹಸ್ತವನ್ನು ಆ ಪಕ್ಷದ ಕಾರ್ಯಕರ್ತರು, ಅಭ್ಯರ್ಥಿಗಳು, ಏಜೆಂಟರು ಸದಾ ಈ 100 ಮೀ. ವ್ಯಾಪ್ತಿಯಲ್ಲಿ ಪ್ರದರ್ಶಿಸುತ್ತಿರುತ್ತಾರೆ. ಇದು ಜನಪ್ರತಿನಿಧಿ ಕಾಯ್ದೆಯ 130ನೇ ಪರಿಚ್ಛೇದ ಹಾಗೂ ಸಾಮಾನ್ಯ ಸಂಹಿತೆಯ 4ನೇ ಪರಿಚ್ಛೇದದ ಉಲ್ಲಂಘನೆ’ ಎಂದು ಅವರು ಆರೋಪಿಸಿದ್ದಾರೆ.

ಹಸ್ತ ಚಿಹ್ನೆಯನ್ನು ಕಾಂಗ್ರೆಸ್‌ (ಐ) ಪಕ್ಷಕ್ಕೆ 1980ರಲ್ಲಿ ನೀಡಲಾಗಿತ್ತು. ಬಳಿಕ ಪಕ್ಷದ ಹೆಸರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (ಐಎನ್‌ಸಿ) ಎಂದು ಬದಲಾದರೂ ಹಸ್ತದ ಚಿಹ್ನೆ ಬದಲಾಗಲಿಲ್ಲ.

Leave a Reply

Your email address will not be published.