Breaking News

ಮಳೆ ಕುಂಠಿತ: ದೇಶ 400ಕ್ಕೂ ಅಧಿಕ ಜಿಲ್ಲೆಗಳಲ್ಲಿ ನೀರಿನ ಅಭಾವ

ಮಳೆ ಕುಂಠಿತ: ದೇಶ 400ಕ್ಕೂ ಅಧಿಕ ಜಿಲ್ಲೆಗಳಲ್ಲಿ ನೀರಿನ ಅಭಾವ

ಕಳೆದ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ದೇಶದಲ್ಲಿ ಮಳೆ ಪ್ರಮಾಣ ತೀವ್ರ ಕೊರತೆ ಉಂಟಾದ ಹಿನ್ನೆಲೆಯಲ್ಲಿ ದೇಶಾದ್ಯಂತ 404 ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ನೀರಿನ ಕೊರತೆ ಎದುರಿಸುತ್ತಿವೆ.

ಭಾರತೀಯ ಹವಾಮಾನ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ 2017ರ ಅಕ್ಟೋಬರ್‌ನಿಂದ 2018ರ ಮಾರ್ಚ್‌ವರೆಗೆ 140 ಜಿಲ್ಲೆಗಳಲ್ಲಿ ತೀವ್ರ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಉಳಿದ 109 ಜಿಲ್ಲೆಗಳಲ್ಲಿ ಮಧ್ಯಮ ಪ್ರಮಾಣದ ಹಾಗೂ 156 ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದ ನೀರಿನ ತೊಂದರೆ ಎದುರಿಸುತ್ತಿವೆ.

ಜನವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ದೇಶದ 153 ಜಿಲ್ಲೆಗಳು ತೀವ್ರ ನೀರಿನ ಕೊರತೆ ಅನುಭವಿಸಿದ್ದು, ಭಾರತೀಯ ಹವಾಮಾನ ಇಲಾಖೆ ಒಟ್ಟು 588 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದ್ದು, ವಿಶೇಷವಾಗಿ ದೇಶದ ಈಶಾನ್ಯ ಭಾಗಗಳಲ್ಲಿ ಮಳೆ ಕೊರತೆ ಹೆಚ್ಚಾಗಿ ಕಂಡುಬಂದಿದೆ. ಕಳೆದ 2017ರ ಮಾನ್ಸೂನ್ ನಿಂದ ಈತನಕ ದೇಶದಲ್ಲಿನ ಮಳೆಗಾತ್ರದ ಪರಿವಿಡಿ (ಎಸ್‌ಪಿಐ) ಅವಲೋಕಿಸಿದರೆ ಒಟ್ಟು 368 ಜಿಲ್ಲೆಗಳು ಹಗುರದಿಂದ ಭಾರಿ ಪ್ರಮಾಣದ ನೀರಿನ ಕೊರತೆ ಎದುರಿಸುತ್ತಿರುವುದು ಗೊತ್ತಾಗಿದೆ. ಇದು ದೇಶದ ಬಹುತೇಕ ಜಿಲ್ಲೆಗಳಲ್ಲಿ ತೀವ್ರ ನೀರಿನ ಕೊರತೆ ಎದುರಿಸುತ್ತಿರುವುದು ಸೂಚಕವಾಗಿದೆ. ಜಗತ್ತಿನಲ್ಲಿ ಎಸ್‌ಪಿಐ ಆಧರಿಸಿ ಆಯಾ ರಾಷ್ಟ್ರಗಳ ಮಳೆ ಪ್ರಮಾಣವನ್ನು ಅಂದಾಜು ಮಾಡಲಾಗುತ್ತದೆ. ಈಗ ನಮ್ಮ ಮುಂದಿರುವ ಅಂಶಗಳನ್ನು ಗಮನಿಸಿದರೆ ದೇಶದಲ್ಲಿ ಮಳೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿದಿರುವುದು ಗೊತ್ತಾಗುತ್ತದೆ. ಇದು ಸಾಮಾನ್ಯ ಮಳೆ ಪ್ರಮಾಣಕ್ಕಿಂತ ತೀರಾ ಕಡಿಮೆ ಎಂದು ಭಾರತೀಯ ಹವಾಮಾನ ಇಲಾಖೆಯ ಕ್ಲೆಮೆಟ್ ಡೇಟಾ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥ ಪುಲಕ್ ಗುಹತಕುರ್ತಾ ವಿಶ್ಲೇಷಿಸಿದ್ದಾರೆ.

ಪ್ರಸಕ್ತ ವರ್ಷದ ಜನವರಿ ಅವಧಿಯಲ್ಲಿ ದೇಶದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಶೇ.63ರಷ್ಟು ಕಡಿಮೆ ಮಳೆ ಬಿದ್ದಿದೆ. ಮಾರ್ಚ್‌ನಿಂದ ಏಪ್ರಿಲ್ 11ರ ಅವಧಿಯಲ್ಲಿ ವಾಡಿಕೆ ಮಳೆಗಿಂತ ಶೇ.31ರಷ್ಟು ಮಳೆ ಕಡಿಮೆ ದಾಖಲಾಗಿದೆ. ದೇಶದ 472 ಜಿಲ್ಲೆಗಳು ಹಗುರದಿಂದ ಕೂಡಿದ ಭಾರಿ ನೀರಿನ ಕೊರತೆ ಹಾಗೂ 153 ಜಿಲ್ಲೆಗಳು ಭಾರಿ ಕೊರತೆ ಎದುರಿಸುತ್ತಿವೆ. ಉತ್ತರ, ಮಧ್ಯ, ಪಶ್ಚಿಮ ಭಾರತದ ಜಿಲ್ಲೆಗಳಲ್ಲಿ ಭಾರಿ ಮಳೆ ಕೊರತೆ ಎದುರಾಗಿದೆ. ಕಳೆದ ತಿಂಗಳು, ಅಂದರೆ ಮಾರ್ಚ್‌ನಲ್ಲಿ ಅತ್ಯಂತ ಕಡಿಮೆ ಮಳೆ ಬಿದ್ದಿದ್ದು, ಪಂಜಾಬ್, ಜಾರ್ಖಂಡ್, ಒಡಿಶಾ, ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತಿಸಗಡ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಜಲಾಶಯಗಳಲ್ಲಿ ನೀರಿನ ಕೊರತೆ ತೀವ್ರ ಕುಗ್ಗಿದೆ.

Leave a Reply

Your email address will not be published.