Breaking News
ಮೈಸೂರು ರಾಜರಿಗಿದು ಸಾವಿನ ‘ಅರಮನೆ’!

ಮೈಸೂರು ರಾಜರಿಗಿದು ಸಾವಿನ ‘ಅರಮನೆ’!

ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜ ಒಡೆಯರ್ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿ ಅಲ್ಲಿನ ಅರಮನೆಯಲ್ಲಿ ವಾಸ್ತವ್ಯ ಮಾಡಿದ್ದಾಗಲೇ ಸಾವಿಗೀಡಾಗಿದ್ದಾರೆ. ಇದನ್ನು ಕಾಕತಾಳೀಯವಾದರೂ ಎನ್ನಿ ಅಥವಾ ಇನ್ನೇನಾದರೂ ಎನ್ನಿ. ಮೈಸೂರಿನ ಮೂವರು ಮಹಾರಾಜರು ನಿಧನರಾಗಿದ್ದು ಬೆಂಗಳೂರು ಅರಮನೆಯಲ್ಲೇ! 

ಆಧುನಿಕ ಮೈಸೂರಿನ ಶಿಲ್ಪಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಂದೆ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರು 1894ರಲ್ಲಿ ನಿಧನರಾದರು. ಆಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಕೇವಲ 10 ವರ್ಷ. ಹೀಗಾಗಿ ಅವರು ಪ್ರಾಪ್ತ ವಯಸ್ಕರಾಗುವ ತನಕ (1894- 1902) ವಾಣಿವಿಲಾಸ ಸನ್ನಿಧಾನ ಮಹಾರಾಣಿ ಕೆಂಪನಂಜಮ್ಮಣ್ಣಿ ರಾಜಪ್ರತಿನಿಧಿಯಾಗಿ ರಾಜ್ಯಾಡಳಿತ ನಡೆಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1902ರಲ್ಲಿ ಅಧಿಕಾರ ಸೂತ್ರ ವಹಿಸಿಕೊಂಡು 1940ರವರೆಗೆ ಅಧಿಕಾರ ನಡೆಸಿ, ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡುವ ಮೂಲಕ ಕೃಷ್ಣರಾಜ ಭೂಪ, ಮನೆಮನೆ ದೀಪ ಎನ್ನುವಷ್ಟರ ಮಟ್ಟಿಗೆ ಜನಪ್ರಿಯರಾದರು.

ಗಾಂಧೀಜಿ ಮೆಚ್ಚುಗೆ: ಪ್ರಜಾಪ್ರತಿನಿಧಿ ಸಭೆಗೆ ಸಾಂವಿಧಾನಿಕ ಸ್ಥಾನಮಾನ, ಮತದಾನ ಪದ್ಧತಿಯಲ್ಲಿ ಸುಧಾರಣೆ, ನ್ಯಾಯವಿಧಾಯಕ ಪರಿಷತ್ತು ಸ್ಥಾಪನೆ, ಮಹಿಳೆಯರಿಗೂ ಮತದಾನದ ಹಕ್ಕು, ದಲಿತರು, ಹಿಂದುಳಿದವರು, ಗ್ರಾಮೀಣ ಬಡವರಿಗೆ ಮೀಸಲಾತಿ ನೀಡಲು ಲೆಸ್ಲಿ ಮಿಲ್ಲರ್ ಸಮಿತಿ ರಚನೆ, ದಸರಾ ವಸ್ತು ಪ್ರದರ್ಶನ ಪುನಾರಂಭ, ಕನ್ನಂಬಾಡಿ ಕಟ್ಟೆ ನಿರ್ಮಾಣ, ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ನಾಲ್ವಡಿಯವರ ಬಹುಮುಖ್ಯ ಕೊಡುಗೆಗಳು. ಇದನ್ನು ಕಂಡೇ ರಾಷ್ಟ್ರಪಿತ ಮಹಾತ್ಮಗಾಂಧಿ ಅವರು ಮೈಸೂರನ್ನು ರಾಮರಾಜ್ಯ ಎಂದೂ, ನಾಲ್ವಡಿ ಅವರನ್ನು ರಾಜರ್ಷಿ ಎಂದೂ ಶ್ಲಾಘಿಸಿದ್ದರು. ನಾಲ್ವಡಿ ಅವರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿ ಅಲ್ಲಿನ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದಾಗ 1940ರ ಆ.3ರಂದು ಹೃದಯಾಘಾತದಿಂದ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಮೈಸೂರಿಗೆ ತಂದು ಮಧುವನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ನಾಲ್ವಡಿ ಅವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ಅವರ ಸಹೋದರ ಕಂಠೀರವ ನರಸಿಂಹರಾಜ ಒಡೆಯರ್ ಅವರ ಪುತ್ರ ಜಯಚಾಮರಾಜ ಒಡೆಯರ್ ಅವರಿಗೆ ಪಟ್ಟಾಭಿಷೇಕ ಮಾಡಲಾಯಿತು. ಇವರು ಕೂಡ ಉತ್ತಮವಾಗಿ ಆಡಳಿತ ನಡೆಸಿ, ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಪ್ರಜಾರಾಜ್ಯ ಸ್ಥಾಪನೆಗೆ ಅನುವು ಮಾಡಿಕೊಟ್ಟು ರಾಜ ಪ್ರಮುಖರಾದರು. ನಂತರ ಮೈಸೂರು ಹಾಗೂ ಮದ್ರಾಸ್ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ಅವರು ಕೂಡ ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿ ಅಲ್ಲಿನ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದಾಗಲೇ ಹೃದಯಾಘಾತದಿಂದ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಕೂಡ ಮೈಸೂರಿಗೆ ತಂದು ಮಧುವನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಆಗ ಅಂತಿಮಯಾತ್ರೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು.

ಪ್ರಜಾಪ್ರಭುತ ವ್ಯವಸ್ಥೆಯ ಜಾರಿಗೆ ಬಂದ ನಂತರ ರಾಜರ ಆಳ್ವಿಕೆಗೆ ಯಾವುದೇ ಮಹತ್ವ ಇಲ್ಲವಾದರೂ ಜಯಚಾಮರಾಜ ಒಡೆಯರ್ ಅವರ ಏಕೈಕ ಪುತ್ರರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಪಟ್ಟಾಭಿಷೇಕ ನೆರವೇರಿಸಲಾಯಿತು. ಒಡೆಯರ್ ತಮ್ಮ ವ್ಯವಹಾರದ ಜತೆಗೆ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿ 1984, 1989, 1996, 1999- ಹೀಗೆ ನಾಲ್ಕು ಬಾರಿ ಮೈಸೂರು ಲೋಕಸಭಾ ಸದಸ್ಯರಾಗಿದ್ದರು.

ಬಿಜೆಪಿ ಸೇರಿ 1991ರ ಚುನಾವಣೆಯಲ್ಲಿ ಸೋತಿದ್ದರು. ಮತ್ತೆ ಕಾಂಗ್ರೆಸ್‌ನಲ್ಲಿ 2004ರಲ್ಲಿ ಸೋತಿದ್ದರು. ಅನಾರೋಗ್ಯ ನಿಮಿತ್ತ 1998ರಲ್ಲಿ ಸ್ಪರ್ಧಿಸಿರಲಿಲ್ಲ. 2008ರಲ್ಲಿ ಟಿಕೆಟ್ ಸಿಕ್ಕಿರಲಿಲ್ಲ.

ಆಗ ಸೇರಿದಷ್ಟೇ ಜನ ಈಗಲೂ ಸೇರಿದ್ದು ದಾಖಲೆ: ಇವರು ಕೂಡ ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿ ಅಲ್ಲಿನ ಅರಮನೆಯಲ್ಲಿ ವಾಸ್ತವ್ಯ ಹೂಡಿದಾಗ ತೀವ್ರ ಹೃದಯಾಘಾತಕ್ಕೀಡಾಗಿ ಸಾವಿಗೀಡಾದರು. ಅವರ ಪಾರ್ಥಿವ ಶರೀರವನ್ನು ಮೈಸೂರಿಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು. ಜಯಚಾಮರಾಜ ಒಡೆಯರ್ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಂತಿಮಯಾತ್ರೆ ನಡುವೆ ಸುಮಾರು 40 ವರ್ಷಗಳ ಅಂತರವಿದೆ. ಆಗ ಸೇರಿದಷ್ಟೇ ಜನ ಈಗಲೂ ಸೇರಿದ್ದು ದಾಖಲೆ. ಅಂಬಾವಿಲಾಸ ಅರಮನೆಯಲ್ಲಿರುವ ಕಲ್ಯಾಣ ಮಂಟಪ ರಾಜರ ಉಪನಯನ, ಪಟ್ಟಾಭಿಷೇಕ, ಮದುವೆ ಜತೆಗೆ ಅಂತಿಮ ದರ್ಶನಕ್ಕೂ ಬಳಕೆಯಾಗುತ್ತಿದೆ.

ಬೆಂಗಳೂರು ಅರಮನೆಯಲ್ಲಿಯೇ ಮೂವರು ಮಹಾರಾಜರು ನಿಧನರಾಗಿದ್ದನ್ನು ನೋಡಿದರೆ ಅದನ್ನು ಸಾವಿನ ಮನೆ, ಶೋಕದ ಮನೆ ಎಂದು ಕರೆಯಬಹುದು. ಮೈಸೂರು ಅರಮನೆ ರಾಜರ ನಿವಾಸ ಸ್ಥಳವಾದರೆ ಬೆಂಗಳೂರು ಅರಮನೆ ಆಡಳಿತ ನಿರ್ವಹಣೆಯ ಕೇಂದ್ರವಾಗಿತ್ತು. ಹೀಗಾಗಿ ರಾಜರು ಆಗಾಗ ಅಲ್ಲಿಗೆ ಹೋಗಿ ವಾಸ್ತವ್ಯ ಮಾಡುವುದು ಅನಿವಾರ್ಯವಾಗಿತ್ತು. ಆದರೆ ಅವರು ಈ ರೀತಿ ಮೈಸೂರಿನಿಂದ ಹೊರಗೆ ಹೋದಾಗಲೇ ನಿಧನರಾಗಿದ್ದು ಕಾಕತಾಳೀಯ.

Leave a Reply

Your email address will not be published.