Breaking News
ಮೈಸೂರು ಹೆಸರು ಹೇಗೆ ಬಂತು – ನಮ್ಮ ಮೈಸೂರು, ಇದು ನಮ್ಮ ಊರು

ಮೈಸೂರು ಹೆಸರು ಹೇಗೆ ಬಂತು – ನಮ್ಮ ಮೈಸೂರು, ಇದು ನಮ್ಮ ಊರು

ಯಾರೇ ಆಗಲಿ ಒಮ್ಮೆ ಮೈಸೂರಿಗೆ ಕಾಲಿಟ್ಟರೆ ಈ ನಗರವನ್ನು ಪ್ರೀತಿಸದೇ ಇರಲಾರ. ಅಷ್ಟರ ಮಟ್ಟಿಗೆ ಜನಮನ್ನಣೆಯನ್ನೂ, ವಿಶ್ವವಿಖ್ಯಾತಿಯನ್ನು ಪಡೆದಿರುವ ಈ ನಗರ ಹಲವಾರು ಬಿರುದಾವಳಿಗಳಿಂದ ಪ್ರಜ್ವಲಿಸುತ್ತಿದೆ. ರಾತ್ರಿವೇಳೆ ಚಾಮುಂಡಿಬೆಟ್ಟದ ಮೇಲಿಂದ ಈ ನೋಡಬೇಕು. ಉರಿವ ಕೆಂಡದುಂಡೆಗಳನ್ನು ಯಾರೋ ವಿಶಾಲ ಬಯಲಿನಲ್ಲಿ ಚೆಲ್ಲಿದಂತೆ ಹರಡಿಕೊಂಡಿರುವ ನಗರದ ಸೌಂದರ್ಯಕ್ಕೆ ಮಾರುಹೋಗದವರೇ ಇಲ್ಲ. ವಿಶಾಲ ಬೀದಿಗಳು, ಸುಂದರ ಅರಮನೆಗಳು, ಕಳಶಪ್ರಾಯವಾದ ಚಾಮುಂಡಿಬೆಟ್ಟ, ಪ್ರಖ್ಯಾತ ಶಿಕ್ಷಣ ಸಂಸ್ಥೆಗಳು… ಹೀಗೆ ಹತ್ತು ಹಲವು ವಿಶೇಷಗಳನ್ನು ಹೊಂದಿರುವ ಮೈಸೂರಿನ ಸಮಗ್ರ ಮಾಹಿತಿಯನ್ನು ನೀಡಲಾಗುವುದು.

ಹೆಸರು ಹೇಗೆ ಬಂತು

ಮೈಸೂರು ಎಂಬ ಹೆಸರಿನ ಉಗಮದ ಬಗ್ಗೆ ಹಲವಾರು ಚರ್ಚೆಗಳಿವೆ. ತಾರ್ಕಿಕವಾಗಿ ಹೆಚ್ಚು ಜನ ಒಪ್ಪಿರುವ ವಿಚಾರವೆಂದರೆ ಇಲ್ಲಿ ಎಮ್ಮೆಗಳನ್ನು ಹೆಚ್ಚಾಗಿ ಸಾಕಲಾಗುತ್ತಿತ್ತು. ಗರಿಕೆಮಾಳ, ಎಮ್ಮೆಮಾಳ ಎಂದು ದೊಡ್ಡಕೆರೆ ಮೈದಾನವನ್ನು ಈಗಲೂ ಕರೆಯುವವರು ಇದ್ದಾರೆ. ಈ ಎಮ್ಮೆಗಳ ಕಾರಣದಿಂದಾಗಿ ಈ ಹೆಸರು ಬಂದಿದೆ ಎಂಬ ವಾದ ತರ್ಕಕ್ಕೆ ಹತ್ತಿರದಲ್ಲಿದೆ. ಎಮ್ಮೆಯನ್ನು ಸಂಸ್ಕೃತದಲ್ಲಿ ಮಹಿಷಿ, ಮಹಿಷ ಎಂದು ಕರೆಯಲಾಗುತ್ತದೆ. ಹಾಗಾಗಿ ಎಮ್ಮೆಗಳ ಊರು ಮಹಿಷೂರು, ಮೈಸೂರಾಯಿತು. ಮಹಿಷಾಸುರ ಎಂಬ ವ್ಯಕ್ತಿಗೂ, ಈ ಹೆಸರಿಗೂ ಐತಿಹಾಸಿಕ ದಾಖಲೆಗಳು ಇಲ್ಲ. ಚಾಮುಂಡೇಶ್ವರಿ ಹಾಗೂ ಮಹಿಷಾಸುರ ಎಂಬ ಹೆಸರುಗಳು ಈ ಊರಿನಷ್ಟು ಪ್ರಾಚೀನತೆಯನ್ನು ಪಡೆದಿಲ್ಲ (ಓದಿ: ಮೈಸೂರು ಇತಿಹಾಸ) ಹೆಸರಿನ ಬಗ್ಗೆ ಇರುವ ಇತರ ಚರ್ಚೆಗಳೆಂದರೆ… ಮಹಿಷ ಎಂಬ ಅಸುರ ಇಲ್ಲಿ ವಾಸವಾಗಿದ್ದ. ಚಾಮುಂಡೇಶ್ವರಿ ಅವತಾರವೆತ್ತಿ ಆತನನ್ನು ಕೊಂದಳು. ಮಹಿಷನ ಊರು ಎಂಬ ಕಾರಣಕ್ಕಾಗಿ ಈ ಊರಿಗೆ ಮೈಸೂರು ಎಂಬ ಹೆಸರು ಬಂದಿದೆ ಎಂಬ ವಾದವಿದೆ. ಹಿಂಸಾ ಪೀಡಕ ಎನ್ನಲಾದ ಅಸುರನ ಹೆಸರನ್ನು ಊರಿಗೆ ಇಡಲು ಸಾಧ್ಯವೆ? ಹಾಗಿದ್ದರೆ ಚಾಮುಂಡಿಯ ಹೆಸರನ್ನೇ ಇಡಬಹುದಿತ್ತಲ್ಲವೆ.? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ಮೈಸೂರಿನ ಇತಿಹಾಸ

ಮೈಸೂರಿನ ಇತಿಹಾಸವನ್ನು ಗಂಗರ ಕಾಲದವರೆಗೆ ಗುರುತಿಸಲಾಗಿದೆ. ಚಾಮುಂಡಿಬೆಟ್ಟದ ಮೇಲಿರುವ ಮಹಾಬಲೇಶ್ವರ ದೇವಾಲಯದಲ್ಲಿ ಕ್ರಿ. ಶ. 950ರಲ್ಲಿ ಗಂಗರ ಕಾಲದ್ದು ಎನ್ನಲಾದ ಶಾಸನ ಸಿಕ್ಕಿದೆ. ಇದರಿಂದಾಗಿ ಮಹಾಬಲೇಶ್ವರ ದೇವಾಲಯ ಅತ್ಯಂತ ಪುರಾತನ ಶಿವ ದೇವಾಲಯಗಳಲ್ಲಿ ಒಂದು ಎಂಬುದು ಸಾಬೀತಾಗಿದೆ. ಬಹಳ ಕಾಲದವರೆಗೆ ಈ ಬೆಟ್ಟಕ್ಕೆ ಮಹಾಬಲಾದ್ರಿ ಎಂಬ ಹೆಸರಿತ್ತು ಎಂಬ ಉಲ್ಲೇಖವೂ ಇದೆ. 1399ರಲ್ಲಿ ಮೈಸೂರು ರಾಜರು ಅಧಿಕಾರಕ್ಕೆ ಬಂದ ನಂತರ ಚಾಮುಂಡೇಶ್ವರಿ ದೇವಾಲಯ ಪ್ರವರ್ಧಮಾನಕ್ಕೆ ಬಂತು. ಕೆಲ ವರ್ಷಗಳ ನಂತರ ಈ ಬೆಟ್ಟ ಚಾಮುಂಡಿಬೆಟ್ಟ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು. ಮೈಸೂರು ನಗರದ ಸ್ಥಾಪನೆ ಸುಮಾರು ೧೧ನೇ ಶತಮಾನದಲ್ಲಿ ನಡೆಯಿತೆಂದು ನಂಬಲಾಗಿದೆ. ೧೪ನೆಯ ಶತಮಾನದ ಕೊನೆಯ ಹೊತ್ತಿಗೆ ಒಡೆಯರ್ ವಂಶದ ಅರಸರು ಮೈಸೂರನ್ನು ಆಳಲಾರಂಭಿಸಿದರು. ಈ ವಂಶದ ಮೊದಲ ಅರಸು “ಯದುರಾಯ”. ಹಾಗಾಗಿ ವಂಶದ ಹೆಸರು ‘ಯದುವಂಶ’ ಎಂದಾಯಿತು. ಮೊದಲಿಗೆ ವಿಜಯನಗರ ಸಾಮ್ರಾಜ್ಯದ ಭಾಗವಾಗಿದ್ದ ಮೈಸೂರು ಸಂಸ್ಥಾನ ೧೫೬೫ ರಲ್ಲಿ ವಿಜಯನಗರದ ಪತನದ ನಂತರ ಸ್ವತಂತ್ರ ರಾಜ್ಯವಾಯಿತು. ರಣಧೀರ ಕಂಠೀರವ ನರಸರಾಜ ಒಡೆಯರ್ ಈ ಸಂಸ್ಥಾನವನ್ನು ವಿಸ್ತರಿಸಿದವರಲ್ಲಿ ಮುಖ್ಯರು. ೧೮ನೆಯ ಶತಮಾನದಲ್ಲಿ ಒಡೆಯರ್ ಅರಸರ ಪ್ರಭಾವ ಕಡಿಮೆಯಾಗಿ ಹೈದರ್ ಅಲಿ ಮತ್ತು ಟೀಪು ಸುಲ್ತಾನ್‌ರ ಆಡಳಿತ ನಡೆಯಿತು. ಈ ಸಮಯದಲ್ಲಿ ಸಾಮ್ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣ ಮತ್ತು ಮೈಸೂರು ನಗರಗಳ ನಡುವೆ ಬದಲಾಗುತ್ತಿತ್ತು. ಮೈಸೂರು ಸಂಸ್ಥಾನ ಆಧುನಿಕ ಕರ್ನಾಟಕದ ದಕ್ಷಿಣ ಭಾಗದ ಬಹುಭಾಗವನ್ನು ಒಳಗೊಂಡಿತ್ತು. ೧೭೯೯ರಲ್ಲಿ ಟೀಪು ಸುಲ್ತಾನನ ಸೋಲಿನ ನಂತರ, ಬ್ರಿಟಿಷರು ಒಡೆಯರ್ ಮನೆತನವನ್ನು ಸಿಂಹಾಸನದ ಮೇಲೆ ಪುನಃ ಸ್ಥಾಪಿಸಿದರು. ಮೈಸೂರು ಬ್ರಿಟಿಷ್ ಸಾಮ್ರಾಜ್ಯದ ಕೆಳಗೆ ಉಳಿಯಿತು ಮತ್ತು ೧೮೩೪ ರಲ್ಲಿ ರಾಜಧಾನಿಯನ್ನು ಬೆಂಗಳೂರಿಗೆ ವರ್ಗಾಯಿಸಲಾಯಿತು. ಮೈಸೂರು ಸಂಸ್ಥಾನ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯಾನಂತರ ಭಾರತ ಗಣರಾಜ್ಯವನ್ನು ಸೇರಿ ೧೯೫೦ ರಲ್ಲಿ ಮೈಸೂರು ರಾಜ್ಯ ಎಂಬ ಹೆಸರು ಪಡೆಯಿತು. ನಂತರ, ಈ ರಾಜ್ಯ ೧೯೫೬ರ ಏಕೀಕರಣ ನಂತರ “ವಿಶಾಲ ಮೈಸೂರು ರಾಜ್ಯ” ಎಂಬ ಹೆಸರು ಪಡೆಯಿತು. ಆ ಬಳಿಕ ೧೯೭೩ರಲ್ಲಿ “ಕರ್ನಾಟಕ ರಾಜ್ಯ ” ಎಂಬ ಹೆಸರು ಸ್ಥಿರವಾಯಿತು. ಮೈಸೂರು ನಗರ ಸಮುದ್ರ ಮಟ್ಟದಿಂದ ೭೭೦ ಮೀ ಎತ್ತರದಲ್ಲಿದೆ, ಹಾಗೂ ಬೆಂಗಳೂರು ನಗರದಿಂದ ೧೪೦ ಕಿಮೀ ದೂರದಲ್ಲಿದೆ. ಮೈಸೂರಿನಲ್ಲಿ ಪ್ರತಿ ವರ್ಷ ಹತ್ತು ದಿನ-ಒಂಬತ್ತು ರಾತ್ರಿಗಳವರೆಗೆ ದಸರಾ ಅಥವಾ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸ ಲಾಗುತ್ತದೆ. ಇದು ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ನಡೆಯುವುದು.

Leave a Reply

Your email address will not be published.