Breaking News
400 ವರ್ಷಗಳ ದಸರಾ ಇತಿಹಾಸ ಹೇಳುವ ಕಥೆ ಇದು… !

400 ವರ್ಷಗಳ ದಸರಾ ಇತಿಹಾಸ ಹೇಳುವ ಕಥೆ ಇದು… !

ಮೈಸೂರು: ಇಂದಿನ ಮೈಸೂರು ‘ಮಹಿಷೂರು’ ಆಗಿದ್ದಾಗ ಹದಿನಾಡು ಗ್ರಾಮದಿಂದ ಬಂದ ಅರಸು ಜನಾಂಗದ ಮನೆತನವೊಂದು ಇತ್ತು. ದೂರದಿಂದ ಬಂದ ಯದುರಾಯನಿಗೆ ಸದ್ಗುಣ ಸಂರಕ್ಷಕನೆಂದು ತಿಳಿದು ಇದೇ ಕುಟುಂಬ ನಂಟು ಬೆಳೆಸಿತು. ಆಗ ಯದುರಾಯ ಈ ಸಣ್ಣ ಊರೊಂದರ ನೇತೃತ್ವ ವಹಿಸಿದ. ರಾಜನೆಂದು ಕರೆದರು. ಮುಂದಿನ ಉತ್ತರಾಧಿಕಾರಿಗಳಿಗೆಲ್ಲ ಹೆಸರಿನ ಮುಂದೆ ‘ಒಡೆಯರ್’ ಎಂದು ಸೇರಿಸಿಕೊಂಡು, ಕದಂಬ, ಗಂಗ, ಚಾಲುಕ್ಯರಂತೆ ಈ ಮನೆತನವೂ ಆಳ್ವಿಕೆ ನಡೆಸಲು ಪ್ರಾರಂಭಿಸಿತು. ಈ ಒಡೆಯರ್ ಎಂಬ ರಾಜಮನೆತನದಲ್ಲಿ ಪ್ರಜಾಪ್ರಭುತ್ವ ಬರುವವರೆಗೆ ‘ರಾಜತ್ವ’ ನೀಡಿದವರು 25 ಮಂದಿ. ಈ ಪೈಕಿ ಯದುರಾಯ, ಒಬ್ಬ ರಣಧೀರ ಕಂಠೀರವ, ಇನ್ನೊಬ್ಬ ತಿಮ್ಮರಾಜ, ಮತ್ತಿಬ್ಬರು ರಾಜ ಒಡೆಯರ್, ಹತ್ತು ಮಂದಿ ಚಾಮರಾಜರು, ನಾಲ್ವರು ಕೃಷ್ಣರಾಜರು, ಕೊನೆಯದಾಗಿ ಜಯಚಾಮರಾಜೇಂದ್ರ ಆಗಿ ಹೋದವರು.

ಈ ಒಡೆಯರ ಹೆಸರಿನ ರಾಜರು ಗಂಡಭೇರುಂಡ ಲಾಂಛನ ಹೊತ್ತು ಎರಡು ಕಡೆ ಆಳ್ವಿಕೆ ನಡೆಸಿದ್ದಾರೆ. ಒಂದು ಮೈಸೂರು ಮತ್ತೊಂದು ಶ್ರೀರಂಗಪಟ್ಟಣ, ಮೊದಲಿಂದ ಐವರು ಮೈಸೂರನ್ನು ಕೇಂದ್ರವಾಗಿರಿಸಿಕೊಂಡರೆ 6 ರಿಂದ 21ರವರೆಗಿನ ರಾಜರು ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದಾರೆ. ನಂತರದ ನಾಲ್ವರು ಮತ್ತೆ ಮೈಸೂರಿಗೆ ಸ್ಥಳಾಂತರವಾಗಿ ಅಧಿಕಾರ ನಡೆಸಿದ್ದಾರೆ. ಹಲವರು ಯುದ್ಧ ಮಾಡಿದ್ದರೆ ಮತ್ತೆ ಕೆಲವರು ಇಂಗ್ಲಿಷರೊಂದಿಗೆ ಸಮನ್ವಯ ಸಾಧಿಸಿದ್ದಾರೆ. ಪ್ರಜಾಪ್ರಭುತ್ವ ಪದ್ಧತಿಯೊಂದಿಗೆ ಅಪ್ಪಿಕೊಂಡು ರಾಜತ್ವ ಸಾಧಿಸಿದವರಿದ್ದಾರೆ.
ಈ ಹಿನ್ನೆಲೆಯಲ್ಲಿ ಎಂದೋ ವಿಜಯನಗರದಲ್ಲಿ ನಡೆದಿದ್ದ ಮಹಾನವಮಿ ಆಚರಣೆಯನ್ನು ಪುನರ್ ಜಾರಿಗೊಳಿಸಿ ವೈಭವೀಕರಿಸಬೇಕೆಂದು ರಾಜ ಒಡೆಯರ್ ಇಂದಿಗೆ 400 ವರ್ಷಗಳ ಹಿಂದೆ 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಈ ದಸರೆಯ ದಿಬ್ಬಣವನ್ನು ಗೌರಿ ಕಡುವೆ ಎಂಬ ಸ್ಥಳದಲ್ಲಿ ಪುನಾರಂಭಿಸಿದರು.


ಈತ ದಸರೆ ಪದ್ಧತಿಗೊಂದು ಕಟ್ಟಳೆ ರೂಪಿಸಿದ. ಇದೇ ಸಂದರ್ಭದಲ್ಲಿ ಸಿಂಹಾಸನವನ್ನೇರಿದ. ಕೆಲ ಊರುಗಳನ್ನೂ ಗೆದ್ದ. ದಳವಾಯಿ ಹುದ್ದೆಯನ್ನು ಸೃಷ್ಟಿಸಿದ. ದಸರೆಯನ್ನು ಈತ ರಾಜನ ವಾರ್ಷಿಕ ವರದಿ, ಆಡಳಿತದ ಪ್ರತಿಬಿಂಬ ಜನಮುಖಿ ಕಾರ್ಯಕ್ರಮವೆಂದುಕೊಂಡು ಆಳಿದವನು. ಇದೇ ಮಾದರಿಯಲ್ಲಿ ಮುಂದಿನ ಎಲ್ಲಾ ದಸರೆಗಳೂ ನಡೆದಿವೆ. ಆ ವೈಭವವನ್ನು ಮುಂದೆ ಬಂದ ರಾಜರು ತರಲಾಗದಿದ್ದರೂ ಯಾವ ಮಾರ್ಪಾಡನ್ನೂ ಮಾಡಿಲ್ಲ.ಕೆಲವು ಬಿಟ್ಟು ಹೋಗಿವೆ. ಹಲವು ಆಧುನಿಕ ಸ್ಪರ್ಶಕ್ಕೆ ಸಿಕ್ಕಿವೆ. ಇದೊಂದು ಪರಂಪರೆಯಾಗಿ ಶ್ರೀರಂಗಪಟ್ಟಣದಿಂದ ಮೈಸೂರಿನ ಬನ್ನಿಮಂಟಪದವರೆಗೆ ಬಂದು ನಿಂತಿದೆ. ಮೈಸೂರಿನ ದಸರೆ ಪ್ರಾರಂಭವಾಗಿ (ಮುಮ್ಮಡಿ ಕೃಷ್ಣರಾಜ ಒಡೆಯರ್) 205ನೇ ವರ್ಷ ತುಂಬುತ್ತಿದೆ.

ಬದಲಾದ ಕಾಲಘಟ್ಟದಲ್ಲಿ ಮೆರವಣಿಗೆಯಲ್ಲಿ ಹೊಸದು ತುಂಬಿಕೊಂಡಿದೆ. ಆಡಳಿತ, ಹಣಬಲದ ಅನುಕೂಲ ನೋಡಿಕೊಂಡು ಜಂಬೂಸವಾರಿಯಂತೂ ಸಾಗಿದೆ. ಆದರೆ ಅರಮನೆಯ ಅಂತರಂಗದಲ್ಲಿ ನಡೆಯುವ ದಸರೆ ಹಬ್ಬ ಪೂಜೆ-ಪುನಸ್ಕಾರ, ಕಲಾಪಗಳು ಒಂದಿಷ್ಟೂ ಬದಲಾಗಿಲ್ಲ. ಅದೇ ಕಂಕಣ, ಅದೇ ದೇವಪೂಜೆ, ಅದೇ ದರ್ಬಾರ್, ಅದೇ ವ್ಯವಸ್ಥೆ ಶಿಸ್ತುಗಳು ಇಂದೂ ಖಾಸಗಿ ದರ್ಬಾರ್ನಲ್ಲೂ ಸಾಕ್ಷೀಭೂತವಾಗಿದೆ. ಎಲ್ಲರಿಗೂ, ರಾಜ್ಯಕ್ಕೂ ಅದೇ ಅಧಿದೇವತೆ ಚಾಮುಂಡೇಶ್ವರಿ. ಈ ಹಿನ್ನೆಲೆಯಲ್ಲಿ ಈ ರಾಜ ಮಹಾರಾಜರು ಮಾಡಿದುದನ್ನೂ ಸೂಕ್ಷ್ಮವಾಗಿ ಗುರುತಿಸುವುದು ಈಗ ಸೂಕ್ತ. ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ಚಾಮುಂಡಿಬೆಟ್ಟದಲ್ಲಿ ಹಿರೀಕೆರೆ ಕಟ್ಟಿಸಿದರು. ಬಿರುದಂತೆಂಬರ ಗಂಡ ಬಿರುದನ್ನು ತಿಮ್ಮರಾಜ ಹೊತ್ತ, ಸುಗುಣ ಗಂಭೀರನೆಂದು ಬೋಳ ಚಾಮರಾಜ ಕರೆಸಿಕೊಂಡ. ರಣಧೀರ ಕಂಠೀರವ ನರಸಿಂಹರಾಜ ತಿರುಚಿನಾಪಳ್ಳಿ ಜಟ್ಟಿಯನ್ನುಹೊಡೆದ. ಆಯುಧ ಶಾಲೆ ಕಟ್ಟಿಸಿದ. ಮೈಸೂರಿನಲ್ಲಿ ಕೋಟೆಯನ್ನು ಬಲಪಡಿಸಿ ಫಿರಂಗಿಗಳನ್ನಿಟ್ಟು, ಚಿಕ್ಕದೇವರಾಜ ಒಡೆಯರ್ 18 ಇಲಾಖೆಗಳನ್ನೂ ಅಂಚೆ ಪದ್ಧತಿಯನ್ನು ಜಾರಿಗೊಳಿಸಿದ. ಅರಸು ಮನೆತನದ ಗಣತಿ ಕಾರ್ಯ ನಡೆಸಿದ. ಬೆಟ್ಟದ ಭೀಮರಾಜರಿದ್ದಾಗ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ರಥಕ್ಕೂ ಮದ್ದಿನಮನೆಗಳಿಗೂ ಬೆಂಕಿ ಬಿತ್ತು. ಖಾಸಾ ಭೀಮರಾಜರಿದ್ದಾಗಲೇ ಹೈದರ್- ಟಿಪ್ಪು ಅಧಿಕಾರಕ್ಕೆ . ಮುಮ್ಮಡಿ ಕಾಲದಲ್ಲಿ ಇಂಗ್ಲಿಷರ ಪ್ರಾಬಲ್ಯ. ಆದರೂ ಸಾಹಿತ್ಯ-ಸಂಗೀತಕ್ಕೆ ಪೋಷಣೆ. ಒಡೆಯರ್ ಕಾಲದಲ್ಲಿ ಆಧುನಿಕ ಶಿಕ್ಷಣ, ಪ್ರಜಾಸತ್ತೆಯ ಕಲ್ಪನೆ ರೂಪ ಪಡೆದುಕೊಂಡಿತು. ನಾಲ್ವಡಿಯವರಿಂದ ಸಾಮಾಜಿಕ -ಕೈಗಾರಿಕೆ ಅಭಿವೃದ್ಧಿ ಜಯಚಾಮರಾಜೇಂದ್ರರ ಕಾಲದಲ್ಲಿ ರಾಜತ್ವ ಹಿಂದೆ ಸರಿದು ಪ್ರಜಾಪ್ರಭುತ್ವ ಪ್ರತ್ಯಕ್ಷವಾಯಿತು.

ಈ ಎಲ್ಲಾ ರಾಜರೂ ಹತ್ತಿತರದ ಸಂಬಂಧಿಗಳಾದ ಹಳ್ಳಿಯ ಹುಡುಗಿಯರನ್ನು ರಾಣಿಯರನ್ನಾಗಿ ಮಾಡಿಕೊಂಡಿದ್ದಾರೆ. ಇಬ್ಬರಿಂದ ಹತ್ತು ಮಂದಿವರೆಗೆ ಹಾಗೂ ಒಂದಿಬ್ಬರು ದೂರದ ರಾಜಸ್ಥಾನದವರನ್ನು ಮದುವೆಯಾದವರಿದ್ದಾರೆ.
ಆದಷ್ಟೂ ಜನಮುಖಿಯಾಗಿ ನಡೆದುಕೊಂಡು ಜನರಲ್ಲಿ ವಿಶ್ವಾಸ, ಭಕ್ತಿ ರೂಢಿಸಿಕೊಂಡ ರಾಜಮನೆತನ ಇದಾಗಿದೆ. ದಾನ, ಧರ್ಮ, ಧರ್ಮಕಾರಣ, ಜನೋಪಯೋಗಿ, ಲೋಕೋಪಯೋಗಿ ಕೆಲಸ ಮಾಡಿದವರೇ ಹೆಚ್ಚು. ಮೈಸೂರು ಒಡೆಯರ್ ಮನೆತನದಲ್ಲಿ ವರ್ಣರಂಜಿತ ಮತ್ತು ವಿವೇಕತನದಲ್ಲಿ ಬಾಳಿದವರೂ ಇದ್ದಾರೆ. ಇವರನ್ನು ನಂಬಿದವರಿಗೆಲ್ಲ ಇವರೊಂದಿಗೆ ಕಷ್ಟ ನಷ್ಟ ಹೇಳಿಕೊಂಡವರಿಗೆಲ್ಲ ಫಲ ಸಿಕ್ಕಿದೆ. ಆ ಮೂಲಕ ರಾಜ್ಯಕ್ಕೂ ಒಳ್ಳೆಯದೇ ಆಗಿದೆ.

Leave a Reply

Your email address will not be published.