Breaking News
ಚುನಾವಣಾ ಪ್ರಚಾರ-ಈಗಿನ ನಟರಿಗೆ ಡಾ. ರಾಜ್ ಮಾದರಿ

ಚುನಾವಣಾ ಪ್ರಚಾರ-ಈಗಿನ ನಟರಿಗೆ ಡಾ. ರಾಜ್ ಮಾದರಿ

ನೀವೇಕೆ ರಾಜಕೀಯಕ್ಕೆ ಬರಬಾರದು ಅಂತ ರಾಜ್‌ಕುಮಾರ್ ಅವರನ್ನು ಅವರ ಮಿತ್ರರೊಬ್ಬರು ಕೇಳಿದಾಗ, ರಾಜ್‌ಕುಮಾರ್ ಹೀಗೆ ಉತ್ತರಿಸಿದ್ದರಂತೆ:
ನವಿಲು ಜಾಗರವಾಡ್ತು ಅಂತ ಕೆಂಬೂತ ಪುಕ್ಕ ತೆರಕೋಬಾರದು! ಈ ಹೇಳಿಕೆಯಲ್ಲಿ ಕೆಂಬೂತ ಯಾರು, ಕೋಗಿಲೆ ಯಾರು ಅನ್ನುವುದನ್ನು ಅವರು ಸ್ಪಷ್ಟಪಡಿಸಲಿಲ್ಲ. ಆದರೆ ರಾಜ್‌ಕುಮಾರ್ ಕೋಗಿಲೆಯ ಹಾಗಿದ್ದವರು. ಎಲ್ಲೋ ಮರೆಯಲ್ಲಿ ಕೂತು ಹಾಡಿಕೊಂಡು ತಮ್ಮ ಪಾಡಿಗೆ ಇದ್ದವರು. ಯಾವತ್ತೂ ಅವರು ಕೆಂಬೂತದ ಹಾಗೆ ಬಯಲಿಗೆ ಬಂದು ಯಾರನ್ನೋ ಮೆಚ್ಚಿಸಲಿಕ್ಕೆ ಕುಣಿದವರಲ್ಲ.

ಈ ಕಾಲಕ್ಕೆ ಯಾರು ಯಾವುದು ಅನ್ನುವುದನ್ನು ಪ್ರಾಜ್ಞರಾದ ಪ್ರೇಕ್ಷಕರು ಅರ್ಥಮಾಡಿಕೊಳ್ಳಬಹುದು. ಹಾಗೆ ಅರ್ಥಮಾಡಿಕೊಂಡಿದ್ದರಿಂದಲೇ ಸ್ಟಾರುಗಳಿಗೆ ಈಗ ಚುನಾವಣಾ ಸಂಕಟ ಎದುರಾಗಿರುವುದು! ಮೊನ್ನೆ ಮೊನ್ನೆ ಸುದೀಪ್ ಚುನಾವಣಾ ಪ್ರಚಾರಕ್ಕೆ ಇಳಿದಾಗ, ಸುದೀಪ್ ಕುಲಬಾಂಧವರು ಮತ್ತು ಅಭಿಮಾನಿಗಳು ಕೆಲವರು ಸಿಟ್ಟು ಮಾಡಿಕೊಂಡರು. ಅವರ ವಿರುದ್ಧ ಕೂಗಾಡಿದರು. ಸೋಷಿಯಲ್ ಮೀಡಿಯಾಗಳಲ್ಲಿ ಅವರ ವಿರುದ್ಧ ಹೇಳಿಕೆಗಳನ್ನು ಕೊಟ್ಟರು. ಇದು ಮಿತಿಮೀರುತ್ತಿದ್ದಂತೆ ಸುದೀಪ್ ಚುನಾವಣಾ ಪ್ರಚಾರ ತನಗೆ ಬೇಕಾಗಿಲ್ಲ ಅಂತ ಹಿಂದಕ್ಕೆ ಸರಿದರು. ಇಂಥದ್ದೇ ವಿರೋಧವನ್ನು ದರ್ಶನ್, ಯಶ್ ಮತ್ತು ಇತರ ಸ್ಟಾರ್ ಪ್ರಚಾರಕರು ಕೂಡ ಎದುರಿಸಬೇಕಾಗಿ ಬಂತು. ಯಾರೆಲ್ಲ ಪ್ರಚಾರಕ್ಕೆ ಹೊರಟು ನಿಂತರೋ ಅವರನ್ನು ವಿರುದ್ಧ ಪಕ್ಷಗಳಿಗೆ ಸೇರಿದ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಜಾಲಾಡಿದರು.

ನೀವು ಅವರ ಪರ ಪ್ರಚಾರ ಮಾಡಕೂಡದು, ಇವರ ಪರವಾಗಿ ಪ್ರಚಾರ ಮಾಡಬಾರದು ಎಂದೆಲ್ಲ ಕೂಗಾಡಿದರು. ಅದಕ್ಕೆ ಯಶ್ ಆಗಲೀ ದರ್ಶನ್ ಆಗಲೀ ಅಷ್ಟಾಗಿ ಗಮನ ಕೊಡಲಿಲ್ಲ. ಅವರು ತಮ್ಮ ಪಾಡಿಗೆ ಪ್ರಚಾರ ಮುಂದುವರಿಸಿಕೊಂಡು ಹೋದರು. ಇದು ಕೇವಲ ಕನ್ನಡ ಸ್ಟಾರುಗಳಿಗೆ ಮಾತ್ರವಲ್ಲ, ರಜನೀಕಾಂತ್, ಕಮಲ್‌ಹಾಸನ್‌ರನ್ನೂ ಬಿಡಲಿಲ್ಲ. ಅವರು ರಾಜಕೀಯ ಪಕ್ಷ ಸೇರುತ್ತಿದ್ದಂತೆ ಅವರ ಪರವೂ ವಿರುದ್ಧವೂ ಮಾತಾಡುವ
ಗುಂಪುಗಳು ಹುಟ್ಟಿಕೊಂಡಿವೆ. ಅವರನ್ನು ವ್ಯವಸ್ಥಿತವಾಗಿ ವಿರೋಧಿಸುವ ಹುನ್ನಾರ ನಡೆಯುತ್ತದೆ. ಅವರು ಎಡಪಂಥೀಯರೋ ಬಲಪಂಥೀಯರೋ ಯಾವ ಪಕ್ಷಕ್ಕೆ ಸೇರಿದವರು ಎಂಬುದರ ಆಧಾರದ ಮೇಲೆ ಮತ್ತೊಂದು ಪಂಗಡ ಅವರ ಜನ್ಮ ಜಾಲಾಡುತ್ತದೆ.

ಇದು ಕೇವಲ ಅವರ ಸಾರ್ವಜನಿಕ ಜೀವನವನ್ನು ಮಾತ್ರ ದೃಷ್ಟಿಯಲ್ಲಿ ಇಟ್ಟುಕೊಳ್ಳುವುದಿಲ್ಲ, ಅವರ ಖಾಸಗಿ ಜೀವನವನ್ನೂ ಘಾಸಿಗೊಳಿಸಲು ನೋಡುತ್ತದೆ. ವೈವಾಹಿಕ ಸಂಬಂಧ, ಬಾಲ್ಯ, ಯಾವತ್ತೋ ಆಡಿದ ಮಾತು ಇವನ್ನೆಲ್ಲ ತಂದು ಸಾಮಾಜಿಕ ಜಾಲತಾಣವೆಂಬ ಸಮುದ್ರದ ದಂಡೆಗೆ ಎಸೆಯುತ್ತದೆ. ಯಾರನ್ನೇ ಆಗಲಿ ಕಂಗೆಡಿಸಬಲ್ಲೆ ಎಂಬ ಪೊಳ್ಳು ಅಹಂಕಾರದಿಂದ ಸಾಮಾಜಿಕ ಜಾಲತಾಣ ಮೆರೆಯುತ್ತಿದೆ. ವಾಟ್ಸ್‌ಆಯಪ್ ಸಂದೇಶಗಳ ಮೂಲಕ, ಫೇಸ್‌ಬುಕ್, ಟ್ವಿಟರ್‌ಗಳ ಮೂಲಕ ಹೇಟ್ ಮೆಸೇಜುಗಳು ರವಾನೆಯಾಗುತ್ತವೆ. ಅವರನ್ನು ಸಾವಿರಾರು ಮಂದಿ ಶೇರ್ ಮಾಡುತ್ತಾರೆ. ಆ ಕುರಿತೇ ಇಡೀ ದೇಶ ಮಾತಾಡುತ್ತಿದೆಯೇನೋ ಎಂಬ ಭಾವನೆ ಹುಟ್ಟುವಂತೆ ಮಾಡುತ್ತವೆ.

ವಾಹಿನಿಗಳಲ್ಲೂ ಅದೇ ಸುದ್ದಿ ಬಂದು, ದೇಶದ ಬಹುದೊಡ್ಡ ಸಮಸ್ಯೆ ಇಂಥ ನಟ ಇಂಥವರ ವಿರುದ್ಧ ಪ್ರಚಾರ ಮಾಡುತ್ತಿರುವುದು ಎಂಬ ಭಾವನೆ ಹುಟ್ಟಿಸುತ್ತವೆ. ಮೊದಲೇ ಹೆದರಿಕೊಳ್ಳುವ ಸ್ಟಾರುಗಳು ಇಂಥ ಸುದ್ದಿ ಬರುತ್ತಿದ್ದಂತೆ ಪೂರ್ತಿ ಕಂಗೆಟ್ಟುಹೋಗಿ, ನಮಗೆ ಇದೆಲ್ಲ ಬೇಡವೇ ಬೇಡ ಎಂದು ಹಿಂದಕ್ಕೆ ಸರಿದು, ತಮ್ಮ ಭ್ರಮಾಲೋಕದ ಚಿಪ್ಪಿನೊಳಗೆ ಕೂತುಬಿಡುತ್ತಾರೆ. ಅಭಿಮಾನ ಎಂಬ ಭ್ರಮಾಲೋಕದ ಪರಿಣಾಮ ಇದು. ಇವತ್ತು ಸ್ಟಾರುಗಳು ಮಣಿಯುವುದು ಅಭಿಮಾನಕ್ಕೆ. ಒಬ್ಬ ನಟ ಏನು ಮಾಡಬೇಕು ಅನ್ನುವುದನ್ನು ಕೂಡ ಅಭಿಮಾನಿಗಳೇ ನಿರ್ಣಯಿಸುತ್ತಾರೇನೋ? ಹೀಗಾಗಿಯೇ ಅಭಿಮಾನಿಗಳು ಮೆಚ್ಚುವಂಥ ಸಿನಿಮಾ, ಅಭಿಮಾನಿಗಳು ಮೆಚ್ಚುವಂಥ ಸಾರ್ವಜನಿಕ ನಡೆ, ಅಭಿಮಾನಿಗಳು
ಇಷ್ಟಪಡುವಂಥ ವರ್ತನೆ- ಹೀಗೆ ಸ್ಟಾರುಗಳು ಸ್ವಂತಿಕೆಯನ್ನೇ ಕಳೆದುಕೊಂಡಿದ್ದಾರಾ ಎಂದು ಅನುಮಾನಿಸುವ ಮಟ್ಟಿಗೆ ಒಬ್ಬ ನಟ ಅಭಿಮಾನದ ಪಂಜರದಲ್ಲಿ ಸಿಕ್ಕಿಬಿದ್ದಂತೆ ಕಾಣಿಸುತ್ತದೆ.

ಎರಡನೆಯದಾಗಿ ಅಭಿಮಾನಿಗಳಲ್ಲದೇ ಇದ್ದವರು ಸ್ಟಾರುಗಳ ಚುನಾವಣಾ ಪ್ರಚಾರದ ನಿರ್ಧಾರವನ್ನು ದುಡ್ಡಿನಿಂದ ಅಳೆಯುವುದಕ್ಕೆ ನೋಡಿದ್ದು. ಸ್ಟಾರುಗಳಿಗೆ ಯಾವುದೇ ಪಕ್ಷ ನಿಷ್ಠೆ ಇಲ್ಲ. ಯಾರು ಹೆಚ್ಚು ದುಡ್ಡು ಕೊಡುತ್ತಾರೋ ಅವರ ಪರವಾಗಿ ಅವರು ಪ್ರಚಾರ ಮಾಡಲು ಹೊರಡುತ್ತಾರೆ. ಇದು ಸ್ಟಾರುಗಳ ಪಾಲಿಗೆ ಕಲೆಕ್ಷನ್ ಟೈಮ್. ಒಬ್ಬನೇ ನಟ ಚಪ್ಪಲಿಗಳಿಗೆ, ಬಿಯರು ಬಾಟಲಿಗೆ, ಟಾಯ್ಲೆಟ್ ಸೋಪುಗಳಿಗೆ ಮಾಡೆಲ್ ಆಗುವಂತೆ ರಾಜಕೀಯ ಪಕ್ಷಗಳಿಗೆ ಮಾಡೆಲ್ ಆಗಿ ಕೆಲಸ ಮಾಡುತ್ತಾನೆ. ಹೀಗಾಗಿ ಆತನ ನಿಲುವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಸ್ಟಾರುಗಳಿಗೆ ಈ ರಾಜ್ಯದಲ್ಲಿ ಏನು ನಡೆಯುತ್ತದೆ ಅನ್ನುವುದು ಕೂಡ ಗೊತ್ತಿಲ್ಲ. ಅವರು ಪ್ರಚಾರ ಕಣಕ್ಕೆ ಬಂದು ತೋಚಿದ ನಾಲ್ಕು ಮಾತಾಡಿ, ಕೈ ಬೀಸಿ ಹೊರಟು ಹೋಗುತ್ತಾರೆ. ಅದರಾಚೆಗೆ ಅವರಿಗೆ ಯಾವ ಬದ್ಧತೆಯೂ ಇಲ್ಲ ಎಂಬುದು ಸಾಮಾನ್ಯ ಜನರ ಅಭಿಪ್ರಾಯ. ಸ್ಟಾರುಗಳು ಪ್ರಜೆಗಳ ನಂಬಿಕೆ ಕಳೆದುಕೊಳ್ಳುವುದು ಹೀಗೆ.

ಹಿರಿಯ ನಿರ್ಮಾಪಕರೊಬ್ಬರ ಪ್ರಕಾರ, ಇವತ್ತು ಸ್ಟಾರುಗಳಿಗೆ ಮಹಾನ್ ಅಭಿಮಾನಿ ಬಳಗ ಏನಿಲ್ಲ. ತಾಲೂಕು ಕೇಂದ್ರಗಳಲ್ಲಿ ಸ್ಟಾರ್ ಸಿನಿಮಾ ಮೂರು ದಿನ ಹೌಸ್‌ಫುಲ್ ಆಗುತ್ತದೆ. ಮುನ್ನೂರು ಸೀಟುಗಳುಳ್ಳ ಚಿತ್ರಮಂದಿರದಲ್ಲಿ ದಿನಕ್ಕೆ ನಾಲ್ಕು ಪ್ರದರ್ಶನ ಇದ್ದರೆ 1200 ಮಂದಿ ಸಿನಿಮಾ ನೋಡುತ್ತಾರೆ. ಇಡೀ ಒಂದು ವಾರ ಹೌಸ್ ಫುಲ್ ಆದರೂ 6000 ಮಂದಿ ಸಿನಿಮಾ ನೋಡಿರುತ್ತಾರೆ. ಅವರಿಗೆ ಇರುವ ಅಭಿಮಾನಿಗಳು ಅಷ್ಟೇ. ಅದೇ ಊರಿನ ಮಿಕ್ಕ ನಲವತ್ತು
ಸಾವಿರ ಮಂದಿಗೆ ಆ ನಟನಾಗಲೀ ಸಿನಿಮಾ ಆಗಲೀ ಮುಖ್ಯ ಅಲ್ಲವೇ ಅಲ್ಲ. ಅಭಿಮಾನಿಗಳನ್ನು ನಂಬಿಕೊಂಡು ಸಿನಿಮಾ ಮಾಡಲಿಕ್ಕಾಗುವುದಿಲ್ಲ.

ಮನರಂಜನೆ ಕೊಡುವ ಸಿನಿಮಾವನ್ನೇ ಗೆಲ್ಲಿಸಲಾಗದ ಸ್ಟಾರುಗಳಿಗೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಶಕ್ತಿಯಿದೆ ಅಂತ ನಂಬುವುದೇ ತಪ್ಪು. ಸ್ಟಾರುಗಳು ಹೋದರೆ ಒಂದಷ್ಟು ಜನ ಸೇರುತ್ತಾರೆ ಎಂಬ ಕಾರಣಕ್ಕೆ ಅವರನ್ನು ಪ್ರಚಾರಕ್ಕೆ ಆಹ್ವಾನಿಸಲಾಗುತ್ತದೆ ಅಷ್ಟೇ. ಅದು ನಿಜ ಅನ್ನುವುದನ್ನು ಹಿಂದಿನ ಇಲೆಕ್ಷನ್ನುಗಳು ಸಾಬೀತು ಮಾಡಿವೆ. ಸ್ಟಾರುಗಳು ಪ್ರಚಾರ ಮಾಡಿದ ಅಭ್ಯರ್ಥಿಗಳ ಪೈಕಿ ಅನೇಕರು ಸೋತಿದ್ದಾರೆ. ಸ್ಟಾರುಗಳು ಪ್ರಚಾರ ಮಾಡದೇ
ಇದ್ದರೂ ಗೆಲ್ಲುತ್ತಿದ್ದವರು ಸಹಜವಾಗಿ ಗೆದ್ದಿದ್ದಾರೆ. ಹೀಗಾಗಿ ತಾವು ಪ್ರಚಾರ ಮಾಡಿ ಗೆದ್ದರು ಎಂದು ಸ್ಟಾರುಗಳು ಹೇಳಿಕೊಳ್ಳುವಂತಿಲ್ಲ.

ಇತ್ತೀಚಿನ ಉದಾಹರಣೆಗಳನ್ನು ನೋಡಿದಾಗ ಸ್ಟಾರ್ಗಳು ಮತ್ತು ರಾಜಕೀಯ ಸ್ಟಾರುಗಳ ಸಂಬಂಧ ಕೇವಲ ಚುನಾವಣೆಯದು ಅಂತ ಹೇಳಲಿಕ್ಕಾಗದು. ರಾಜಕಾರಣಿಗಳ ಮಕ್ಕಳೂ ಸ್ಟಾರುಗಳೂ ಜೊತೆಗಿರುವ ಅನೇಕ ಪ್ರಸಂಗಗಳನ್ನು
ಕನ್ನಡಿಗರು ನೋಡಿದ್ದಾರೆ. ಅವರ ಇರುಳ ಮೈತ್ರಿಗಳು ಹಗಲು ಕನಸುಗಳೂ ಜಗಜ್ಜಾಹೀರಾಗಿವೆ. ಅದು ಚುನಾವಣೆಯ ಸಂದರ್ಭದಲ್ಲಿ ಹೊರಬಂದರೆ ಆಶ್ಚರ್ಯ ಏನಿಲ್ಲ. ಸ್ಟಾರುಗಳು ಇನ್ನೂ ಹೆಚ್ಚಿನ ಬದ್ಧತೆ, ಸ್ಪಷ್ಟ ನಿಲುವು, ಎದೆಗಾರಿಕೆ
ತೋರಿದರೆ ಅವರು ರಾಜಕೀಯದಿಂದ ಹೊರತಾಗಿರಬೇಕಾಗಿಲ್ಲ. ಆದರೆ ರಾಜಕೀಯದ ಮಾತಾಡಿದರೆ ಎದ್ದು ಹೊರಟುಬಿಡುವ, ಧೈರ್ಯವಾಗಿ ಸಂದರ್ಶನ ಕೊಡಲಿಕ್ಕೇ ಅಂಜುವ ಸ್ಟಾರುಗಳಿಂದ ಬದ್ಧತೆ ನಿರೀಕ್ಷೆ ಮಾಡುವುದು ಕಷ್ಟ.

ರಾಜ್‌ಕುಮಾರ್ ಅವರು ಸಾಮಾಜಿಕ ಚಿಂತಕರಾಗಿದ್ದರು. ಒಳ್ಳೆಯದು ಕೆಟ್ಟದ್ದರ ಸ್ಪಷ್ಟ ಕಲ್ಪನೆ ಹೊಂದಿದ್ದರು. ಧೈರ್ಯವಾಗಿ ಮಾತಾಡುತ್ತಿದ್ದರು. ಮತ್ತು ಯಾವುದೇ ಆಮಿಷಗಳಿಗೆ ಬಲಿಯಾಗುತ್ತಿರಲಿಲ್ಲ. ರಾಜಕೀಯದ ಮಾತು ಬಂದಾಗ ನವಿಲಾಗಿಯೇ ಇರುತ್ತೇನೆ. ಮೋಡ ಮಡುಗಟ್ಟಿದಾಗ ನರ್ತಿಸುತ್ತೇನೆಯೇ ಹೊರತು, ಯಾರದೋ ಒತ್ತಾಯಕ್ಕಲ್ಲ ಎಂಬಂತೆ ಇದ್ದುಬಿಟ್ಟಿದ್ದರು.

ತಮ್ಮ ಮನೆಯ ಮೆಟ್ಟಿಲಲ್ಲಿ ಈ ಚಿತ್ರದಲ್ಲಿ ಕೂತಿರುವ ಹಾಗೆ ಕೂತು, ತಮ್ಮ ಬಿಳಿ ಶರಟು ಮತ್ತು ಪಂಚೆಗೆ ಒಂಚೂರು ರಾಜಕೀಯದ ಕೊಳೆ ಕೂಡ ಮೆತ್ತಿಕೊಳ್ಳದಂತೆ ಪರಿಶುದ್ಧವಾಗಿದ್ದರು

Leave a Reply

Your email address will not be published.