Breaking News

ಜೂ.6ರಂದು ನೂತನ ಸಚಿವರ ಪ್ರಮಾಣ ವಚನ..?

ಜೂ.6ರಂದು ನೂತನ ಸಚಿವರ ಪ್ರಮಾಣ ವಚನ..?

ಭಾನುವಾರ ನಿಗದಿಯಾಗಬೇಕಿದ್ದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ರಾಜ್ಯಪಾಲರ ಅಲಭ್ಯತೆ ಹಿನ್ನೆಲೆಯಲ್ಲಿ ಮುಂದೂಡುವ ಸಾಧ್ಯತೆ ಇದೆ. ರಾಜ್ಯಪಾಲ ವಜುಭಾಯಿ ವಾಲಾ ಅವರು ಪೂರ್ವನಿಗದಿ ಕಾರ್ಯಕ್ರಮದಂತೆ ನಾಳೆಯಿಂದ ಮಂಗಳವಾರದವರೆಗೆ ಪ್ರವಾಸಕ್ಕೆ ತೆರಳುವುದರಿಂದ ಸಂಪುಟ ವಿಸ್ತರಣೆ, ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಬಹುತೇಕ ಜೂ.6ರಂದು ನಡೆಯುವ ಸಾಧ್ಯತೆಗಳಿವೆ.

ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲಿಂದು ಉಭಯ ಪಕ್ಷಗಳ ನಾಯಕರು ಸಭೆ ಸೇರಿ ಸಚಿವ ಸಂಪುಟದ ಸದಸ್ಯರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಪ್ರಮಾಣ ವಚನ ಕಾರ್ಯಕ್ರಮಕ್ಕೆ ದಿನಾಂಕವನ್ನು ನಿಗದಿಗೊಳಿಸಲಾಯಿತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಮುಖಂಡರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಹತ್ವದ ಮಾತುಕತೆ ನಡೆಸಿದರು. ಖಾತೆ ಹಂಚಿಕೆ ಬಗ್ಗೆ ಇದ್ದ ಗೊಂದಲವನ್ನು ನಿವಾರಿಸಿಕೊಂಡರು.

ಮಾಜಿ ಪ್ರಧಾನಿ ದೇವೇಗೌಡರು, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ಕೂಡ ನಡೆಸಿದರು. ನಂತರ ಹೊರಬಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಸಂಬಂಧ ಯಾವುದೇ ಗೊಂದಲವಿಲ್ಲ. ಎಲ್ಲವೂ ಬಗೆಹರಿದಿದೆ. ರಾಜ್ಯಪಾಲರನ್ನು ಭೇಟಿ ಮಾಡಿ ಭಾನುವಾರ ಪ್ರಮಾಣ ವಚನ ಕಾರ್ಯಕ್ರಮ ನಿಗದಿ ಮಾಡಬೇಕೆಂದುಕೊಂಡಿದ್ದೆವು. ಆದರೆ, ರಾಜ್ಯಪಾಲರು ಪೂರ್ವ ನಿಗದಿ ಕಾರ್ಯಕ್ರಮದಂತೆ ಪ್ರವಾಸ ಹೋಗುವುದರಿಂದ ಅವರು ಜೂ.5ರ ವರೆಗೆ ಸಿಗುವುದಿಲ್ಲ. ಹಾಗಾಗಿ ಇಂದು ನಾನು ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೊಂದಿಗೆ ರಾಜಭವನಕ್ಕೆ ತೆರಳಿ ಚರ್ಚೆ ನಡೆಸುತ್ತೇವೆ. ಸಂಜೆ 4.30ಕ್ಕೆ ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ನೀಡುತ್ತೇವೆ ಎಂದು ಹೇಳಿದರು.

Leave a Reply

Your email address will not be published.