Breaking News

ಕರ್ನಾಟಕದಲ್ಲಿ ‘ಕಾಲಾ’ ಚಿತ್ರ ಬಿಡುಗಡೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್..!

ಕರ್ನಾಟಕದಲ್ಲಿ ‘ಕಾಲಾ’ ಚಿತ್ರ ಬಿಡುಗಡೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್..!

-ತಮಿಳಿನ ಸ್ಪೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಕಾಲಾ ಚಿತ್ರ ಬಿಡುಗಡೆಗೆ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಹೈಕೋರ್ಟ್‍ನ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ.  ಕಾಲಾ ಚಿತ್ರ ಬಿಡುಗಡೆ ನಿಷೇಧಕ್ಕೆ ಸಂಬಂಧಿಸಿದಂತೆ ರಜನೀಕಾಂತ್ ಅಳಿಯ ಧನುಷ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು, ಬೆದರಿಕೆ ಇರುವ ಚಿತ್ರಮಂದಿರಗಳಿಗೆ ಸರ್ಕಾರ ಭದ್ರತೆ ಒದಗಿಸಬೇಕು, ಚಿತ್ರಪ್ರದರ್ಶನ ಸಂಬಂಧ ನಿರ್ಮಾಪಕರು ಸರ್ಕಾರಕ್ಕೆ ಎಲ್ಲಾ ವಿವರಗಳನ್ನು ಸಲ್ಲಿಸಬೇಕೆಂದು ಹೈಕೋರ್ಟ್ ಸೂಚನೆ ನೀಡಿದೆ.

ಈ ಮೂಲಕ ಕಾಲಾ ಚಿತ್ರ ಬಿಡುಗಡೆಗೆ ಇದ್ದ ಆತಂಕ ನಿವಾರಣೆಯಾಗಿದೆ. ಕಾವೇರಿ ಪ್ರಾಧಿಕಾರ ರಚನೆ ಸಂಬಂಧ ಚಿತ್ರ ನಟ ಪ್ರಸ್ತುತ ತಮಿಳುನಾಡಿನ ರಾಜಕಾರಣಿಯೂ ಆಗಿರುವ ರಜನೀಕಾಂತ್ ನೀಡಿರುವ ಹೇಳಿಕೆ ಸಂಬಂಧ ಕನ್ನಡಪರ ಸಂಘಟನೆಗಳು ಅವರ ಚಿತ್ರವನ್ನು ರಾಜ್ಯದಲ್ಲಿ ನಿಷೇಧಿಸುವುದಾಗಿ ಬೆದರಿಕೆ ಹಾಕಿದ್ದವು. ಅಲ್ಲದೆ, ಕಾಲಾ ಚಿತ್ರ ಬಿಡುಗಡೆ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಒಕ್ಕೂಟ ಸೇರಿದಂತೆ ಹಲವಾರು ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿದ್ದವು.

ಇದರ ವಿರುದ್ಧ ರಜನೀ ಅಳಿಯ ಧನುಷ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಇಂದು ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಪದ್ಮಾವತ್ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಪ್ರದರ್ಶನಕ್ಕೆ ಸೂಕ್ತ ಭದ್ರತೆ ಒದಗಿಸಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಸೂಕ್ತ ಭದ್ರತೆ ಒದಗಿಸಿ ಪ್ರದರ್ಶನಕ್ಕೆ ಅವಕಾಶ ನೀಡದಿದ್ದರೆ ಆದೇಶ ಉಲ್ಲಂಘನೆಯಾಗುತ್ತದೆ ಎಂದು ಉಲ್ಲೇಖಿಸಿದೆ. ಸುಪ್ರೀಂ ಆದೇಶ ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆಯಾಗುತ್ತದೆ. ಉಲ್ಲಂಘಿಸಿದರು ನ್ಯಾಯಾಂಗ ನಿಂದನೆಯನ್ನೂ ಕೂಡ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದೆ. ಚಿತ್ರಪ್ರದರ್ಶನಕ್ಕೆ ಯಾರನ್ನೂ ಬಲವಂತಪಡಿಸಲಾಗದು. ಭದ್ರತೆ ಕಾನೂನು ಸುವ್ಯವಸ್ಥೇ ಸರ್ಕಾರದ ಹೊಣೆ. ಇದು ವಿಫಲವಾದರೆ ನ್ಯಾಯಾಲಯಕ್ಕೆ ವಿಫಲವಾದರೆ ನ್ಯಾಯಾಲಯಕ್ಕೆ ಬನ್ನಿ ಎಂದು ಅರ್ಜಿದಾರರಿಗೆ ನ್ಯಾಯಾಲಯ ಸೂಚಿಸಿದೆ.

ಸಂಘಟನೆಗಳಿಂದ ಬೆದರಿಕೆ ಬಂದರೆ ಸರ್ಕಾರದ ಗಮನಕ್ಕೆ ತನ್ನಿ ಎಂದು ನ್ಯಾಯಾಲಯ ಹೇಳಿದೆ. ಜೂ.7 ರಂದು ಕಾಲಾ ಚಿತ್ರ ಬಿಡುಗಡೆಗೆ ಇದ್ದ ನಿಷೇಧ ಹೈಕೋರ್ಟ್‍ನ ಮಧ್ಯಂತರ ಆದೇಶದಿಂದ ಕೊಂಚ ನಿರಾಳವಾದಂತಾಗಿದೆ. ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸದಿದ್ದರೆ ಪ್ರದರ್ಶನ ಯಥಾಸ್ಥಿತಿ ನಡೆಯಲಿದೆ.

Leave a Reply

Your email address will not be published.