Breaking News
ಮತ್ತೆ 15 ಶುದ್ಧ ಕುಡಿವ ನೀರಿನ ಘಟಕ

ಮತ್ತೆ 15 ಶುದ್ಧ ಕುಡಿವ ನೀರಿನ ಘಟಕ

ಮೈಸೂರು ನಗರ ಪಾಲಿಕೆ ಹೆಚ್ಚುವರಿಯಾಗಿ ನಗರದ ವಿವಿಧೆಡೆ ಇನ್ನೂ 15 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಮುಂದಾಗಿದ್ದು, ಸಾರ್ವಜನಿಕರು ಸಂತಸಗೊಂಡಿದ್ದಾರೆ.

ನಗರದಲ್ಲಿ ಶುದ್ಧ ಕುಡಿಯುವ ನೀರಿಗೆ ಈಗ ಎಲ್ಲಿಲ್ಲದ ಬೇಡಿಕೆ. ಖಾಸಗಿ ಸಂಸ್ಥೆಗಳು ನೀಡುವ 20 ಲೀಟರ್‌ ಶುದ್ಧ ಕುಡಿಯುವ ನೀರಿಗೆ 20 ರೂ. ನಿಂದ 40 ರೂ.ವರೆಗೆ ಹಣವನ್ನು ನೀಡಬೇಕಾಗಿತ್ತು. ಹಾಗಾಗಿ ಸದ್ಯ ಪಾಲಿಕೆ ಕ್ರಮದಿಂದ ನಾಗರಿಕರು ಈಗ ನಿರಾಳವಾಗಿದ್ದಾರೆ. ಸಾರ್ವಜನಿಕರು ಇನ್ಮುಂದೆ 5 ರೂ.ಗೆ 20 ಲೀಟರ್‌ ನೀರು ಪಡೆಯಬಹುದು.

ದಶಕಗಳ ಹಿಂದೆ ಮೈಸೂರು ನಗರ ಪಾಲಿಕೆಯ ವಾಣಿ ವಿಲಾಸ ನೀರು ಸರಬರಾಜು ಕೇಂದ್ರಕ್ಕೆ ಪೂರೈಕೆಯಾಗುತ್ತಿದ್ದ ನದಿ ನೀರನ್ನು ಶುದ್ಧೀಕರಿಸಿ ಇಡೀ ನಗರಕ್ಕೆ ವಿತರಣೆ ಮಾಡಲಾಗುತ್ತಿದ್ದರೂ ಜನರು ಕೂಡ ಮನೆಯ ನಲ್ಲಿಗಳಲ್ಲಿ ಬರುತ್ತಿದ್ದ ನೀರನ್ನು ಆರಾಮವಾಗಿ ಕುಡಿಯುತ್ತಿದ್ದರು. ಈಗ ಆ ನೀರು ಕುಡಿಯಲು ಸಾಕಷ್ಟು ಯೋಗ್ಯವಾಗಿರದ ಕಾರಣ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಮೈಸೂರು ನಗರದ ಆಯ್ದ ಸ್ಥಳಗಳಲ್ಲಿ 13 ಘಟಕಗಳನ್ನು ನಿರ್ಮಿಸಿದ್ದರೂ, ಜನ ಸಾಮಾನ್ಯರಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಶಾಸಕರು ಮತ್ತು ಸಂಸದರ ಅನುದಾನದಿಂದ 15 ಘಟಕಗಳನ್ನು ಆಯ್ದ ಸ್ಥಳಗಳಲ್ಲಿ ಸ್ಥಾಪಿಸಲು ನಿರ್ಧರಿಸಿ, ಕಾಮಗಾರಿ ಆರಂಭಿಸಿದೆ.

ಇದರೊಂದಿಗೆ ಕೆಲ ಖಾಸಗಿ ಸ್ವಯಂ ಸೇವಾ ಸಂಸ್ಥೆಗಳು ಕೂಡ ಪಾಲಿಕೆಯ ಅನುಮತಿ ಪಡೆದು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದು, ಆರು ಘಟಕಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಸ್ಥಳೀಯ ನಿವಾಸಿಗಳಿಗೆ ಶುದ್ಧಕುಡಿಯುವ ನೀರು ಪೂರೈಕೆ ಮಾಡುತ್ತಿವೆ.

Leave a Reply

Your email address will not be published.