Breaking News

ಮೈಸೂರಿನ ವ್ಯಕ್ತಿ ಚೀನಾದೇಶದಲ್ಲಿ ಯೋಗ ಗುರು

ಮೈಸೂರಿನ ವ್ಯಕ್ತಿ ಚೀನಾದೇಶದಲ್ಲಿ ಯೋಗ ಗುರು

ಮೈಸೂರು:ಜೂ.21ರಂದು ಸಾಂಸ್ಕೃತಿಕ ನಗರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಆದರೆ ಇಲ್ಲಿನವರೇ ಆಗಿರುವ ವ್ಯಕ್ತಿಯೋರ್ವರು ಚೀನಾದೇಶದಲ್ಲಿ ಯೋಗ ಗುರುವಾಗಿದ್ದಾರೆ ಎಂಬ ಸತ್ಯ ಹಲವರಿಗೆ ತಿಳಿದಿಲ್ಲ.

ಯೋಗವಿಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ನಮ್ಮ ಮೈಸೂರಿಗರೊಬ್ಬರು ಚೈನಾ ದೇಶಕ್ಕೆ ಯೋಗ ಪಾಠ ಕಲಿಸುತ್ತಿದ್ದಾರೆ. ಹೊರ ರಾಷ್ಟ್ರದಲ್ಲಿ ಭಾರತೀಯ ಯೋಗಕ್ಕೆ ಅದರಲ್ಲೂ ಮೈಸೂರು ಯೋಗಕ್ಕೆ ಸಾಕಷ್ಟು ಬೇಡಿಕೆಯಿದೆ. ಅದಕ್ಕಾಗಿ ಮೈಸೂರಿಗೆ ನೂರಾರು ಸಂಖ್ಯೆಯಲ್ಲಿ ವಿದೇಶಿಗರು ಬಂದು ಯೋಗಾಭ್ಯಾಸ ಮಾಡ್ತಾರೆ. ಇವುಗಳ ಮಧ್ಯೆಯೇ ಇವತ್ತು ನಮ್ಮ ಹೆಮ್ಮೆಯ ಸಾಂಸ್ಕೃತಿಕ ನಗರಿ ಮೈಸೂರಿನ ಸುರೇಶ್ ಪುಟ್ಟಲಿಂಗಪ್ಪ ಎಂಬವರು ಚೈನಾಗೆ ಯೋಗ ಗುರುವಾಗಿದ್ದಾರೆ. ಚೈನಾ ದೇಶದ ಮಿಲ್ಕ್ ಪ್ರಾಡಕ್ಟ್ ನ ರಾಯಭಾರಿಯಾಗಿರುವ ಮೈಸೂರಿನ ವಿಜಯನಗರ ನಿವಾಸಿಯಾಗಿರುವ ಸುರೇಶ್ ಇವತ್ತು ಚೈನಾ ದೇಶಕ್ಕೆ ಗುರುವಾಗಿದ್ದಾರೆ. ಬರೋಬ್ಬರಿ 14 ವರ್ಷಗಳಿಂದ ಯೋಗ ಕಲಿಸುತ್ತಿರುವ ಇವರು ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಮೈಸೂರಿನಲ್ಲಿ ನಡೆಯಲಿರುವ ಬೃಹತ್ ಯೋಗದಲ್ಲಿ ಪಾಲ್ಗೊಳ್ಳಲು ತವರಿಗೆ ಬಂದಿದ್ದಾರೆ. ಈ ಹಿಂದೆಯೇ ನಮ್ಮ ಮೈಸೂರು ಯೋಗ ಗಿನ್ನಿಸ್ ದಾಖಲೆ ಮಾಡಿ ಆಗಿದೆ. ಹಾಗಾಗಿ ಈ ಬಾರಿ ಮತ್ತೊಂದು ಬೃಹತ್ ಯೋಗದಲ್ಲಿ ಭಾಗಿಯಾಗಲು ಸುರೇಶ್ ಪುಟ್ಟಲಿಂಗಪ್ಪ ಸೇರಿದಂತೆ ಕುಟುಂಬದ 35 ಮಂದಿಯೂ ಪಾಲ್ಗೊಳ್ಳಲಿದ್ದಾರಂತೆ. ವಿಶೇಷ ಅಂದರೆ ಇವರ ಸಂಪೂರ್ಣ ಕುಟುಂಬವೇ ರೋಗ ಮುಕ್ತ ಯೋಗ ಕುಟುಂಬ. ಇವರ ಕುಟುಂಬದಲ್ಲಿರುವ ಸುರೇಶ್ ಹಾಗೂ ಪತ್ನಿ, ಅಕ್ಕ- ಅವರ ಮಕ್ಕಳು ದೊಡ್ಡಪ್ಪನ ಮಕ್ಕಳು, ದೊಡ್ಡಮ್ಮನ ಮಕ್ಕಳು ಸೇರಿದಂತೆ ಬರೋಬ್ಬರಿ 35 ಮಂದಿಯೂ ಯೋಗ ಮಾಡುತ್ತಾರಂತೆ, ಮಾತ್ರವಲ್ಲ, ಎಲ್ಲರಿಗೂ ಯೋಗ ಕಲಿಸಿ ಕೊಡುತ್ತಾರಂತೆ.

ಸುರೇಶ್ ಹೇಳಿಕೊಡುವ ಯೋಗದಿಂದ ರೋಗ ದೂರವಾಗತ್ತೆ, ಮಾತ್ರವಲ್ಲದೇ, ಇವರು ಹೇಳಿಕೊಡುವ ಆಸನಗಳು ನಿಜಕ್ಕೂ ಮಹಿಳೆಯರಿಗೆ ಅದರಲ್ಲೂ ಗರ್ಭಿಣಿಯರಿಗೆ ತುಂಬಾನೆ ಹೆಚ್ಚಿನ ಅನುಕೂಲ ಆಗಲಿದೆ. ಹಾಗಾಗಿಯೇ ಇವರು ಚೈನಾದಲ್ಲಿ ಆಯೋಜನೆ ಮಾಡುವ ಯೋಗದಲ್ಲಿ ನೂರಾರು ಸಂಖ್ಯೆಯ ಗರ್ಭಿಣಿಯರು ಭಾಗಿಯಾಗುತ್ತಾರಂತೆ.. ವಿಶೇಷ ಅಂದರೆ, ಇವರು ಗರ್ಭಿಣಿಯರಿಗೆ ಹೇಳಿಕೊಡುವ ಯೋಗದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆ ಆಗದೆ ನಾರ್ಮಲ್ ಡೆಲಿವರಿ ಆಗಬೇಕೆಂಬುದು ಮೊದಲ ಉದ್ದೇಶ ಆಗಿದೆ. ಹಾಗಾಗಿ ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಇವರ ಬಳಿ ಯೋಗ ಕಲಿತಿದ್ದಾರೆ. ಮಾತ್ರವಲ್ಲ, ಯುವತಿಯರಿಗಾಗಿಯೂ ವಿಶೇಷ ಯೋಗವನ್ನು ಆಯೋಜನೆ ಮಾಡುತ್ತಾರಂತೆ. ಹಾಗಾಗಿಯೇ ಇವತ್ತು ಚೈನಾ ದೇಶದಲ್ಲಿ ಇವರು ಆಯೋಜನೆ ಮಾಡಿರುವ ನೂರಾರು ಕಾರ್ಯಕ್ರಮದಲ್ಲಿ ಮಹಿಳೆಯರು, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಾರಂತೆ.

ಮೈಸೂರಿಗೆ ಆಗಮಿಸಿರುವ ಸುರೇಶ್ ತಮ್ಮ ಕುಟುಂಬ ಸದಸ್ಯರ ಜೊತೆ ಯೋಗವನ್ನು ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಬೆಳ್ಳಂಬೆಳಗ್ಗೆ ಇವ್ರು ಮಾಡುವ ಯೋಗ ಕೂಡ ವಿಶೇಷವೇ. ಯಾಕಂದರೆ, ಇಲ್ಲಿಯೂ ಕೂಡ ತಮ್ಮ ಕುಟುಂಬದವರು ಒಟ್ಟಾಗಿ ಸೇರಿ ಯೋಗ ಮಾಡುತ್ತಾರೆ. ವಿಶ್ವ ಯೋಗ ದಿನಾಚರಣೆಯಂದು ದಾಖಲೆಯ ಯೋಗದಲ್ಲಿ ಭಾಗಿಯಾಗಿ ಮತ್ತೊಮ್ಮೆ ಭಾರತಕ್ಕೆ ಕಿರೀಟ ಬರಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಾರೆ. ಹಾಗಾಗಿಯೇ ನಮ್ಮ ರಾಜ್ಯದಲ್ಲಿರುವ ಪ್ರತಿಯೊಬ್ಬರೂ ವಿಶ್ವ ಯೋಗ ದಿನಾಚರಣೆಗೆ ಭಾಗಿಯಾಗಿ ಮತ್ತೊಂದು ಗಿನ್ನಿಸ್ ದಾಖಲೆ ಬರೆಯೋಣ ಅನ್ನೋ ಆಸೆ ಸುರೇಶ್ ಪುಟ್ಟಲಿಂಗಪ್ಪ ಅವರದ್ದು.

ಚೈನಾದಲ್ಲಿ ಮೈಸೂರಿಗರೊಬ್ಬರು ಗುರುವಾಗಿ ಪಾಠ ಮಾಡುತ್ತಿದ್ದು, ದೇಶಕ್ಕೆ ಹೆಮ್ಮೆಯ ಸಂಗತಿಯಾದರೆ, ಎಲ್ಲರೂ ಯೋಗ ಕಲಿತು ಆರೋಗ್ಯವಾಗಿರಿ ಎಂಬ ಸಂದೇಶ ಸುರೇಶ್ ಅವರದ್ದಾಗಿದೆ. ಇಷ್ಟು ದೊಡ್ಡ ಸಾಧನೆ ಮಾಡಿದರೂ ಕೂಡ ನಾನೂ ಕೂಡ ಕುಟುಂಬ ಸಮೇತವಾಗಿ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗಿಯಾಗುತ್ತೇನೆ ಎನ್ನುವ ಸುರೇಶ್ ಪುಟ್ಟಸ್ವಾಮಿ ಅವರ ಸರಳತೆ ಮೆಚ್ಚುವಂಥದ್ದೇ.

Leave a Reply

Your email address will not be published.