Breaking News
ಜು.5ರಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರಸರ್ಕಾರದ ಚೊಚ್ಚಲ ಬಜೆಟ್ ಮಂಡನೆ

ಜು.5ರಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರಸರ್ಕಾರದ ಚೊಚ್ಚಲ ಬಜೆಟ್ ಮಂಡನೆ

ಬೆಂಗಳೂರು: ಯಾರೂ ಎಷ್ಟೇ ವಿರೋಧಿಸಿದರೂ ತಲೆ ಕೆಡಿಸಿಕೊಳ್ಳದೆ ಈಗಾಗಲೇ ನಿಗದಿಯಾಗಿರುವಂತೆ ಜು.5ರಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಹಾಗೂ ರೈತರ ಸಾಲಮನ್ನಾಕ್ಕೆ ಕಾಂಗ್ರೆಸ್ ಹಸಿರು ನಿಶಾನೆ ತೋರಿದೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ ಬಜೆಟ್ ಮಂಡನೆ ವಿರೋಧ ಮಾಡಿದ್ದರೂ ಅದನ್ನು ಲೆಕ್ಕಿಸದೆ ನಿಗದಿಯಾಗಿರುವ ದಿನಾಂಕದಂದೆ ಬಜೆಟ್ ಮಂಡಿಸಿ ಎರಡೂ ಪಕ್ಷಗಳ ಪ್ರಣಾಳಿಕೆ ಕಾರ್ಯಕ್ರಮಗಳನ್ನು ಸೇರ್ಪಡೆ ಮಾಡುವಂತೆ ಹೈಕಮಾಂಡ್ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಸೂಚಿಸಿದೆ.

ನಮಗೆ ಕರ್ನಾಟಕದಲ್ಲಿ ಸುಸ್ಥಿರ ಹಾಗೂ ಜನಪರವಾದ ಸರ್ಕಾರವನ್ನು ಮುನ್ನೆಡೆಸುವ ಅಗತ್ಯವಿದೆ. ಯಾವುದೇ ನಾಯಕರು ಏನೇ ಹೇಳಿಕೆ ನೀಡಿದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಸರ್ಕಾರವನ್ನು ಅಸ್ಥಿರಗೊಳಿಸುವ ಯಾವ ಪ್ರಯತ್ನಗಳು ಈಡೇರುವುದಿಲ್ಲ. ಐದು ವರ್ಷಗಳ ಕಾಲ ನೀವು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೀರಿ. ಬಜೆಟ್ ಮಂಡನೆಗೆ ಸಿದ್ದತೆಯನ್ನುಮಾಡಿಕೊಳ್ಳುವಂತೆ ಹೈಕಮಾಂಡ್ ಕುಮಾರಸ್ವಾಮಿಗೆ ಸಲಹೆ ಮಾಡಿದೆ ಎಂದು ತಿಳಿದುಬಂದಿದೆ.
ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಕಂಡುಬಂದರೂ ಅದನ್ನು ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಬಜೆಟ್‍ನಲ್ಲಿ ಸೇರ್ಪಡೆ ಮಾಡಬೇಕಾದ ಕಾರ್ಯಕ್ರಮಗಳು, ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಾತಿ, ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಮತ್ತಿತರ ಪ್ರಮುಖ ತೀರ್ಮಾನಗಳ ಬಗ್ಗೆ ಸಾಮಾನ್ಯ ಕಾರ್ಯಕ್ರಮಗಳ ಸಮಿತಿ ಅಧ್ಯಕ್ಷರಾಗಿರುವ ವೀರಪ್ಪ ಮೊಯ್ಲಿ ಜೊತೆ ಚರ್ಚಿಸಬೇಕು.

ಪ್ರತಿ ತಿಂಗಳು ಒಂದು ಬಾರಿ ಸಭೆ ಸೇರಿ ಸರ್ಕಾರದ ನಡವಳಿಕೆಗಳ ಬಗ್ಗೆ ಪರಾಮರ್ಶೆ ನಡೆಸಬೇಕು. ಒಂದು ವೇಳೆ ಈಗಿನ ಸಂದರ್ಭದಲ್ಲಿ ನಮ್ಮಲ್ಲೇ ನಾವು ಕಿತ್ತಾಡಿಕೊಂಡು ಸರ್ಕಾರ ಪತನವಾದರೆ ಬಿಜೆಪಿಗೆ ರತ್ನಗಂಬಳಿ ಹಾಕಿ ಸರ್ಕಾರ ರಚಿಸಲು ಅವಕಾಶ ಕೊಟ್ಟಂತಾಗುತ್ತದೆ. ಸ್ಥಳೀಯ ನಾಯಕರ ಹೇಳಿಕೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂಬ ಕಾಂಗ್ರೆಸ್‍ನ ಹಿರಿಯ ನಾಯಕರು ಅಭಯ ನೀಡಿದ್ದಾರೆ.

Leave a Reply

Your email address will not be published.