Breaking News
ಅಪ್ಪನ ಪ್ರಾಣ ಉಳಿಸಲು ತನ್ನ ಲಿವರ್ ಕೊಡಲು ಮುಂದಾದ ಮಗ

ಅಪ್ಪನ ಪ್ರಾಣ ಉಳಿಸಲು ತನ್ನ ಲಿವರ್ ಕೊಡಲು ಮುಂದಾದ ಮಗ

ಮೈಸೂರು: ಯಕೃತ್ (ಲಿವರ್) ಸಮಸ್ಯೆಯಿಂದ ಬಳಲುತ್ತಿರುವ ಅಪ್ಪನ ಪ್ರಾಣ ಉಳಿಸಲು ಮಗನೇ ತನ್ನ ಲಿವರ್ ಕೊಡಲು ಮುಂದಾಗಿದ್ದಾನೆ. ಈ ಮೂಲಕ ಮಗ ತನ್ನ ತಂದೆಗೆ ಕಲಿಯುಗದ ಕರ್ಣನಾಗಿದ್ದಾನೆ.ಚಿನ್ನ-ಬೆಳ್ಳಿ ವ್ಯಾಪಾರಿಯಾಗಿರುವ ನಗರದ ವೀರನಗೆರೆಯ ನಿವಾಸಿಯಾಗಿರುವ ಅಶೋಕ್ ಜೈನ್ ಎಂಬುವರಿಗೆ ಪುತ್ರ ಪ್ರೀತೇಶ್ ಜೈನ್ ಲಿವರ್ ನೀಡುವ ಮನಸ್ಸು ಮಾಡಿದ್ದಾರೆ. ಕಳೆದ 8 ವರ್ಷಗಳಿಂದ ಸಣ್ಣದಾಗಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅಶೋಕ್ ಜೈನ್ ಅವರಲ್ಲಿ ಇತ್ತೀಚಿಗೆ ಸಮಸ್ಯೆ ತೀವ್ರ ಸ್ವರೂಪ ಪಡೆದಕೊಂಡಿದೆ. ಅಂತೆಯೇ ಮೊದಲಿಗೆ ಮೈಸೂರಿನ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಶೋಕ್ ಬಳಿಕ ವೈದ್ಯರ ಸಲಹೆ ಮೇರೆಗೆ ಚೆನ್ನೈನ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅಶೋಕ್ ಅವರ ಸಮಸ್ಯೆ ಗಂಭೀರವಾದ ಹಿನ್ನೆಲೆಯಲ್ಲಿ ತಿಂಗಳೊಳಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ಈಗಿರುವ ಯಕೃತ್​ಅನ್ನು ಸಂಪೂರ್ಣವಾಗಿ ತೆಗೆದು ಬೇರೆ ಲಿವರ್ ಜೋಡಣೆ ಮಾಡಬೇಕಾಗಿದೆ. ಇದಕ್ಕಾಗಿ ಕುಟುಂಬಸ್ಥರೇ ದಾನಿಗಳಾದರೆ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇನ್ನು ತಂದೆಗೆ ಬಂದಿರುವ ಲಿವರ್ ಸಿರೋಸಿಸ್ ಕಾಯಿಲೆಗೆ ಲಿವರ್ ಬದಲಾವಣೆ ಮಾಡಬೇಕಾದ ಅವಶ್ಯಕತೆ ಇರುವುದರಿಂದ ಅವರ ಮಗ ಪ್ರೀತೇಶ್ ಜೈನ್ ತನ್ನ ಲಿವರ್ ಕೊಡಲು ಮುಂದಾಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ಪ್ರೀತೇಶ್ ಜೈನ್ ತೂಕ ಇಳಿಸಲು ಕಸರತ್ತು ಆರಂಭಿಸಿದ್ದಾರೆ. ಪ್ರೀತೇಶ್ ಜೈನ್ 90 ಕೆಜಿ ತೂಕವಿದ್ದು, 75 ಕೆಜಿಗೆ ತೂಕ ಇಳಿಸಿದರೆ ಶಸ್ತ್ರಚಿಕಿತ್ಸೆಗೆ ಸಹಾಯವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಅಂತೆಯೇ ಪ್ರೀತೇಶ್ ಹಲವು ದಿನಗಳಿಂದ ಸೈಕ್ಲಿಂಗ್ ಮತ್ತು ವೇಗದ ನಡಿಗೆ ಮಾಡುತ್ತಿದ್ದಾರೆ. 25 ದಿನಗಳಲ್ಲಿ 6 ಕೆಜಿ ತೂಕ ಇಳಿಸಿರುವ ಪ್ರೀತೇಶ್ ಜೈನ್, ದಿನ ನಿತ್ಯ ಪಥ್ಯಾಹಾರ ಸೇವನೆ ಮಾಡುತ್ತಿದ್ದಾರೆ. ವಾಹನ ಬಳಸುವುದನ್ನೇ ನಿಲ್ಲಸಿದ್ದು, ದಿನನಿತ್ಯ ಎಲ್ಲಾ ಕೆಲಸಗಳಿಗೂ ಸೈಕಲ್ ಮೇಲೆಯೇ ಸಾಗುತ್ತಿದ್ದಾರೆ. ಈ ತಿಂಗಳೊಳಗಾಗಿ ತೂಕ ಇಳಿಸುವ ಭರವಸೆಯನ್ನು ಪ್ರೀತೇಶ್ ವ್ಯಕ್ತಪಡಿಸಿದ್ದಾರೆ. ಯಕೃತ್ ದಾನ ಮಾಡಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಇದರ ಬಗ್ಗೆ ಇರುವ ತಪ್ಪು ತಿಳುವಳಿಕೆ ಬೇಡ. ಯಕೃತ್ ದಾನ ಮಾಡಿದ ವ್ಯಕ್ತಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎನ್ನುತ್ತಾರೆ ಉದರ ರೋಗಗಳ ತಜ್ಞ ಡಾ. ಸತೀಶ್ ರಾವ್.

Leave a Reply

Your email address will not be published.