Breaking News

ಒಕ್ಕಲಿಗರ ಸಂಘಕ್ಕೆ ಆಡಳಿತಾಧಿಕಾರಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಅಶೋಕಾನಂದ ನೇಮಕ

ಒಕ್ಕಲಿಗರ ಸಂಘಕ್ಕೆ ಆಡಳಿತಾಧಿಕಾರಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಅಶೋಕಾನಂದ ನೇಮಕ

ಬೆಂಗಳೂರುತೀವ್ರ ವಿವಾದಕ್ಕೆ ಗುರಿಯಾಗಿದ್ದ ರಾಜ್ಯ ಒಕ್ಕಲಿಗರ ಸಂಘಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಅಶೋಕಾನಂದ ಅವರನ್ನು ಆಡಳಿತಾಧಿಕಾರಿಯನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ. ಇದರಿಂದ ಒಕ್ಕಲಿಗರ ಸಂಘದಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಆಂತರಿಕ ಕಚ್ಚಾಟಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ. ಸಹಕಾರ ಇಲಾಖೆಯ ವಿಶೇಷ ಕರ್ತವ್ಯ ಅಧಿಕಾರಿ ಹಾಗೂ ಸರ್ಕಾರದ ಉಪಕಾರ್ಯದರ್ಶಿ .ವೆಂಕಟಸ್ವಾಮಿ ಹೊರಡಿಸಿರುವ ಅಧಿಸೂಚನೆಯಲ್ಲಿ ಮುಂದಿನ ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ಅಶೋಕಾನಂದ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಸಂಘದ ಆಡಳಿತಾಧಿಕಾರಿಗಳು ಸಂಘದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ ಆಡಳಿತ ಮಂಡಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಿ ಅಧಿಕಾರ ಹಸ್ತಾಂತರ ಮಾಡುವಂತೆ ಸೂಚಿಸಲಾಗಿದೆ.
ಈ ಹಿಂದೆ ಒಕ್ಕಲಿಗರ ಸಂಘದ ಅಧ್ಯಕ್ಷರ ವಿರುದ್ಧ ಬೆಟ್ಟೇಗೌಡರ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಹಣ ದುರುಪಯೋಗ, ಭ್ರಷ್ಟಾಚಾರ ಹಾಗೂ ನಿರ್ದೇಶಕರ ಒಪ್ಪಿಗೆ ಪಡೆಯದೆ ಕೆಲವು ತೀರ್ಮಾನಗಳನ್ನು ಕೈಗೊಂಡಿದ್ದರು. ಅಧ್ಯಕ್ಷರ ಈ ನಡವಳಿಕೆಯಿಂದ ಬೇಸತ್ತ ಸಂಘದ ಪದಾಧಿಕಾರಿಗಳ ಬದಲಾವಣೆಗೆ ನಿರ್ದೇಶಕರು ಪ್ರಯತ್ನ ಮಾಡಿದ್ದರು. ಅಧ್ಯಕ್ಷರಾಗಿದ್ದ ಬೆಟ್ಟೇಗೌಡ ಮತ್ತು ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ನಿರ್ಣಯವನ್ನೂ ಮಂಡಿಸಿದ್ದರು. ನೂತನ ಪದಾಧಿಕಾರಿಗಳು ಯಾರಾಗಬೇಕೆಂಬ ತೀರ್ಮಾನವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು.
ಆದರೆ ಅನಿರೀಕ್ಷಿತವಾಗಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂಬ ಆರೋಪ ಮಾಡಿದ ಸಂಘದ ನೌಕರರು ಪ್ರತಿಭಟನೆಯನ್ನೂ ಕೂಡ ಮಾಡಿದ್ದರು. ಸಂಘದ ನಿರ್ದೇಶಕರಲ್ಲೇ ಭಿನ್ನಾಭಿಪ್ರಾಯ ಉಂಟಾಗಿತ್ತು. ಸಂಘದಲ್ಲಿ ಸಹಮತವಿಲ್ಲದೆ ಗೊಂದಲದ ವಾತಾವರಣ ಉಂಟಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಿಸಿರುವುದನ್ನು ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಕೆ.ಮಹದೇವ್ ಸ್ವಾಗತಿಸಿದ್ದಾರೆ.

Leave a Reply

Your email address will not be published.