Breaking News

ಚುಂಚಶ್ರೀ ನೇತ್ರತ್ವದಲ್ಲಿ ನಮ್ಮ ಕೊಡುಗೆ ಯಾತ್ರೆ

ಚುಂಚಶ್ರೀ ನೇತ್ರತ್ವದಲ್ಲಿ ನಮ್ಮ ಕೊಡುಗೆ ಯಾತ್ರೆ

ಬೆಂಗಳೂರು: ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಕೊಡಗು ಜಿಲ್ಲೆಯ ಪುನರ್ ನಿರ್ಮಾಣಕ್ಕಾಗಿ ಶ್ರೀ ಆದಿಚುಂಚನಗಿರಿ ಮಠ ಶ್ರೀ ಕ್ಷೇತ್ರದ ನೇತೃತ್ವದಲ್ಲಿ ದೇಣಿಗೆ ಸಂಗ್ರಹಿಸಲು ಇಂದು ನಗರದಲ್ಲಿ “ಕೊಡಗಿಗೆ ನಮ್ಮ ಕೊಡುಗೆ” ಪಾದಯಾತ್ರೆ ನಡೆಸಲಾಯಿತು.ವಿಜಯನಗರದಲ್ಲಿರುವ ಶ್ರೀ ಕ್ಷೇತ್ರದ ಆವರಣದಿಂದ ಆರಂಭಗೊಂಡ ಪಾದಯಾತ್ರೆ ಶನಿಮಹಾತ್ಮ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಮಾಗಡಿ ರಸ್ತೆಯ ಆಂಜನೇಯಸ್ವಾಮಿ ದೇವಸ್ಥಾನ, ವಿಜಯನಗರದ ಮಾರುತಿ ಮಂದಿರದ ಮೂಲಕ ನಡೆದ ಪಾದಯಾತ್ರೆ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಮುಕ್ತಾಯವಾಯಿತು. ಡಾ.ಶ್ರೀ ನಿರ್ಮಲಾನಂದನಾಥ ಶ್ರೀಗಳು ಮಾರ್ಗದುದ್ದಕ್ಕೂ ಪಾದಯಾತ್ರೆಯಲ್ಲಿ ದೇಣಿಗೆ ಸಂಗ್ರಹಕ್ಕೆ ಪ್ರೇರೇಪಣೆ ನೀಡಿದರು.

ಆರಂಭದಲ್ಲಿ ಮಾತನಾಡಿದ ಶ್ರೀಗಳು, ಕೊಡಗು ಜಿಲ್ಲೆ ನಮಗೆ ಹಸಿರು ಮತ್ತು ಉಸಿರನ್ನು ಕೊಟ್ಟಿದೆ. ನಮ್ಮ ದೇಹದ ಭಾಗದಂತಿರುವ ಕೊಡಗಿಗೆ ಮಳೆಯಿಂದ ಹಾನಿಯಾಗಿದೆ. ಅದನ್ನು ಪುನರ್ ನಿರ್ಮಿಸುವ ಕೆಲಸವನ್ನು ನಾವು ಮಾಡಬೇಕಿದೆ. ಕೊಡಗಿಗಾಗಿ ನಮ್ಮ ನಡಿಗೆ ಈ ಪಾದಯಾತ್ರೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಫಾದರ್‍ ಗಳು, ಇಸ್ಲಾಂ ಧರ್ಮದ ಮೌಲ್ವಿಗಳು, ಬೌದ್ಧ ಧರ್ಮದ ಗುರುಗಳು, ಪಾರ್ಸಿ ಸಮುದಾಯದ ಧಾರ್ಮಿಕ ಮುಖಂಡರು ಸೇರಿದಂತೆ ಸರ್ವಧರ್ಮಗಳ ಧಾರ್ಮಿಕ ಮುಖಂಡರು, ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಚಲನಚಿತ್ರ ಕಲಾವಿದರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು. ಮಳೆಯಿಂದ ಸಂತ್ರಸ್ತರಾಗಿರುವ ಕೊಡಗಿನವರ ಸಂಕಷ್ಟಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಅಲ್ಲಿ ಪ್ರಾಣ ಕಳೆದುಕೊಂಡವರಿಗೆ ನಮ್ಮ ಶ್ರದ್ಧಾಂಜಲಿ ಸಲ್ಲಬೇಕಿದೆ ಎಂದು ಹೇಳಿದರು.

ಶ್ರೀ ಕ್ಷೇತ್ರದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶಾಸಕರಾದ ವಿ.ಸೋಮಣ್ಣ, ಎಂ.ಕೃಷ್ಣಪ್ಪ, ಕೆ.ಗೋಪಾಲಯ್ಯ, ಮಾಜಿ ಶಾಸಕ ಶಿವರಾಮಗೌಡ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು.

Leave a Reply

Your email address will not be published.