Breaking News

ಮಹಿಳೆರನ್ನು ಸ್ವಾವಲಂಬಿಯಾಗಿಸುತ್ತಿದೆ ಸಂಜೀವಿನಿ

ಮಹಿಳೆರನ್ನು ಸ್ವಾವಲಂಬಿಯಾಗಿಸುತ್ತಿದೆ ಸಂಜೀವಿನಿ

ಮೈಸೂರು:ರಾಷ್ಟ್ರೀಯ ಗ್ರಾಮೀಣ ಜೀವನೋಪಯ ಸಂವರ್ಧನ ಸಂಸ್ಥೆ ಸಂಜೀವಿನಿ ಯೋಜನೆಯಡಿ ಮಹಿಳೆಯರ ಸ್ವಸಹಾಯ ಗುಂಪುಗಳಲ್ಲಿರುವ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಿ ಜೀವನ ಸುಧಾರಿಸುತ್ತಿದೆ ಎಂದು ರಾಷ್ಟ್ರೀಯ ಗ್ರಾಮೀಣ ಜೀವನೋಪಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕರಾದ ಡಾ|| ಬಿ.ಆರ್.ಮಮತಾ ಅವರು ತಿಳಿಸಿದರು.
ಅವರು ಇಂದು ನಂಜನಗೂಡು ತಾಲ್ಲೂಕಿನ ಕೆಂಬಾಳು ಗ್ರಾಮದಲ್ಲಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಹಿಳಾ ಒಕ್ಕೂಟದವರು ನಡೆಸುತ್ತಿರುವ ಚಪಾತಿ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಒಕ್ಕೂಟದ ಸದಸ್ಯರೊಂದಿಗೆ ಮಾತನಾಡಿದರು, ರಾಂಪುರ ಗ್ರಾಮ ಪಂಚಾಯಿತಿಯಡಿ ಬರುವ ಮಹಿಳಾ ಸ್ವಸಹಾಯ ಒಕ್ಕೂಟಕ್ಕೆ 4 ವರ್ಷಗಳ ಹಿಂದೆ 13.75 ಲಕ್ಷ ರೂ ನೀಡಲಾಗಿತ್ತು ಇಂದು 61 ಲಕ್ಷರೂ ಆರ್ಥಿಕ ವಹಿವಾಟು ನಡೆಸುತ್ತಿದ್ದಾರೆ ಎಂದರು.
ಮಹಿಳೆಯರನ್ನು 2 ರಿಂದ 3 ವಿವಿಧ ಉದ್ಯೋಗಗಳನ್ನು ರೂಢಿಸಿಕೊಳ್ಳಬೇಕು. ಚಪಾತಿ ತಯಾರಿಕೆಯ ಜೊತೆಯಲ್ಲೇ ಮನೆಯಲ್ಲಿ ಹಸು, ಮೇಕೆ, ಕೋಳಿ ಸಾಕಾಣಿಕೆ ಮಾಡಿ. ಮನೆಯ
ಸುತ್ತಲೂ ಸ್ಥಳವಿದ್ದಲ್ಲಿ ಕೈತೋಟ ಮಾಡಿಕೊಳ್ಳಿ ತರಕಾರಿ ಬೆಳೆಯಿರಿ. ಬೆಳೆದ ತರಕಾರಿಯನ್ನು ಮೊದಲು ನಿಮ್ಮ ಕುಟುಂಬಕ್ಕೆ ಉಪಯೋಗಿಸಿ ಪೌಷ್ಠಿಕರಾಗಿ ನಂತರ ಉಳಿದದನ್ನು ಮಾರಾಟ ಮಾಡಿ ಎಂದರು.
ಕೆಂಬಾಳು ಗ್ರಾಮದ ಚಪಾತಿ ತಯಾರಿಕಾ ಘಟಕವನ್ನು ವಿಸ್ತರಿಸಲು ಬೇಕಿರುವ ಸ್ಥಳದ ವ್ಯವಸ್ಥೆ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿರುವ ಮಹಿಳೆಯರು ವಿಸ್ತರಣೆ ಶೆಡ್ ಕೆಲಸ ಮಾಡಿ ಎಂದರು.
30 ಮಹಿಳೆಯರು ಚಪಾತಿ ತಯಾರಿಕಾ ಘಟಕದಲ್ಲಿ ಕೆಲಸ ಮಾಡಿ ಪ್ರತಿ ದಿನ 6000 ಚಪಾತಿ ತಯಾರಿಸಿ ಟಿವಿಎಸ್ ಫ್ಯಾಕ್ಟರಿಗೆ ಪ್ರತಿ ಚಪಾತಿಗೆ 1.90/- ರೂ ಗಳಂತೆ ನೀಡುತ್ತಾರೆ. ಪ್ರತಿ ಮಾಹೆ 5 ರಿಂದ 6 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. ಇವರಿಗೆ ಚಪಾತಿಯನ್ನು ಫ್ಯಾಕ್ಟರಿಗೆ ಸಾಗಿಸಲು ಒಂದು ವಾಹನ ಬೇಕಿರುತ್ತದೆ. ಈ ಬಗ್ಗೆ ಚರ್ಚಿಸಿ ವ್ಯವಸ್ಥೆ ಮಾಡಲಾಗುವುದು ಎಂದರು.
ಮೈಸೂರು ಜಿಲ್ಲೆಯ ವಿವಿಧ ಸ್ಥಳಗಳಲ್ಲಿರುವ ಒಕ್ಕೂಟಗಳು ಮೇಕೆ ಸಾಕಾಣಿಕೆ, ನಾಟಿ ಕೋಳಿ ಸಾಕಾಣಿಕೆ, ಸ್ಯಾನಿಟರಿ ನ್ಯಾಪ್‍ಕಿನ್ ತಯಾರಿಕಾ ಘಟಕ ಪ್ರಾರಂಭಿಸಲಿದ್ದಾರೆ.ಅವರಿಗೆ ಬೇಕಿರುವ ತರಬೇತಿ ಹಾಗೂ ಮಾರುಕಟ್ಟೆಯ ವಿಷಯಗಳ ಬಗ್ಗೆ ತಿಳಿಸಲಾಗುತ್ತಿದೆ ಎಂದರು.
ಮಹಿಳೆಯರು ಸಾಲಕ್ಕಾಗಿ ಸರ್ಕಾರದ ಮೇಲೆ ಅವಲಂಬನೆಯಾಗದೆ ಒಕ್ಕೂಟಗಳಲ್ಲಿ ಆರ್ಥಿಕವಾಗಿ ಸಬಲರಾಗುವ ಉದ್ಯೋಗಗಳನ್ನು ಕೈಗೊಳ್ಳಬೇಕು. ಒಕ್ಕೂಟಗಳು ಮಹಿಳೆಯರಿಗೆ ಉದ್ಯೋಗ ನೀಡುವ ತವರಾಗಬೇಕು. ಇಲ್ಲಿ ಸ್ವಚ್ಛತೆ, ಆರೋಗ್ಯದ ವಿಚಾರಗಳು, ವಿದ್ಯಾಭ್ಯಾಸ ಮುಂತಾದ ವಿಷಯಗಳ ಬಗ್ಗೆ ತಿಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ನಂಜನಗೂಡು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಂಠರಾಜೇ ಅರಸ್, ನಂಜನಗೂಡು ತಾಲ್ಲೂಕಿನ ನರೇಗಾ ಸಹಾಯಕ ನಿರ್ದೇಶಕ ಶ್ರೀನಿವಾಸ್,ಎನ್.ಆರ್.ಎಲ್.ಎಂ. ಜಿಲ್ಲಾ ವ್ಯವಸ್ಥಾಪಕ ಬಸವರಾಜು, ನಂಜನಗೂಡು ತಾಲ್ಲೂಕು ಎನ್.ಆರ್.ಎಲ್.ಎಂ ವ್ಯವಸ್ಥಾಪಕಿ ದಿವ್ಯ ಉಪಸ್ಥಿತರಿದ್ದರು.

Leave a Reply

Your email address will not be published.