Breaking News
ಆಗಸ್ಟ್ 15ರಂದು ಮೈಸೂರು ರಾಜ್ಯಕ್ಕೆ ಸ್ವಾತಂತ್ರ್ಯ ಬರಲೇ ಇಲ್ಲ!

ಆಗಸ್ಟ್ 15ರಂದು ಮೈಸೂರು ರಾಜ್ಯಕ್ಕೆ ಸ್ವಾತಂತ್ರ್ಯ ಬರಲೇ ಇಲ್ಲ!

ನಿಮಗೆ ಗೊತ್ತಾ, ಇಡೀ ದೇಶ 1947ರ ಆಗಸ್ಟ್ 15ರಂದು ಬೆಳಗ್ಗೆ ರಾಷ್ಟ್ರದ್ವಜಾರೋಹಣ
ಮಾಡುತ್ತಾ, ಸಿಹಿ ಹಂಚಿ ಸಂಭ್ರಮಿಸಿದರೆ, ಮೈಸೂರು ರಾಜ್ಯದಲ್ಲಿ ನಿರಾಶೆ, ಆತಂಕದ
ಕಾರ್ಮೋಡ ತುಂಬಿತ್ತು. ಅಂದು ನಮ್ಮ ರಾಜ್ಯಕ್ಕೆ ಸ್ವಾತಂತ್ರ್ಯದ ಸಂಭ್ರಮ ಇರಲೇ ಇಲ್ಲ.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿದ್ದ ಚಪ್ಪನ್ನೈವತ್ತಾರು ಪ್ರಾಂತ್ಯಗಳಲ್ಲಿ
ಮೈಸೂರು ರಾಜ್ಯವೂ ಒಂದು. 1947ರ ಆಗಸ್ಟ್ 14ರ ಮಧ್ಯರಾತ್ರಿ ಬ್ರೀಟೀಷರು ಭಾರತಕ್ಕೆ
ಸ್ವಾತಂತ್ರ್ಯವನ್ನು ನೀಡಿದರು. ಬಹುಪಾಲು ರಾಜ್ಯಗಳು ಭಾರತ ಗಣರಾಜ್ಯದಲ್ಲಿ ಒಗ್ಗೂಡಲು
ಒಪ್ಪಿಕೊಂಡರು. ಆದರೆ ಕೆಲವರು ಒಪ್ಪಿಕೊಳ್ಳಲೇ ಇಲ್ಲ. ಹಾಗೂ ದೇಶದ ಸಾರ್ವಭೌಮತ್ವವನ್ನು
ಒಪ್ಪಿಕೊಳ್ಳದೇ ತಾವೇ ರಾಜರಾಗಿ ಮುಂದುವರಿಯಲು ಬಯಸಿದವರಲ್ಲಿ ಮೈಸೂರು ಜಯಚಾಮರಾಜ
ಒಡೆಯರ್ ಕೂಡ ಒಬ್ಬರು.

ಹಾಗಾಗಿ ಆಗಸ್ಟ್ 15ರಂದು ಇಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ತಡೆಯಿತ್ತು. ಇದು ದೇಶ
ಪ್ರೇಮಿಗಳಿಗೆ ಸಹಿಸಲು ಸಾಧ್ಯವಾಗದ ವಿಷಯವಾಗಿತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡಿ
ಮಡಿದ ವೀರರ ಬಿಸಿರಕ್ತಕ್ಕೆ ಅರ್ಥ ಬರಬೇಕಾದರೆ, ಮಹಾತ್ಮ ಗಾಂಧೀಜಿ ಅವರು ಶಾಂತಿಯುತ
ಸತ್ಯಾಗ್ರಹಕ್ಕೆ ಬೆಲೆ ಬರಬೇಕಾದರೆ ಮೈಸೂರು ರಾಜ್ಯ ಸ್ವತಂತ್ರ ಭಾರತದ ಭಾಗವಾಗಲೇ ಬೇಕು
ಎಂದು ಹೋರಾಟಗಾರರು ಬಯಸಿದರು. ಆಗ ಹುಟ್ಟಿಕೊಂಡಿದ್ದೇ ‘ಮೈಸೂರು ಚಲೋ’ ಹೋರಾಟ.


ಸ್ವಾತಂತ್ರ್ಯ ಹೋರಾಟಗಾರರಾದ ಎಂ.ಎನ್.ಜೋಯಿಸ್, ಎಚ್.ನರಸಿಂಹಯ್ಯ,
ಎಚ್.ಎಸ್.ದೊರೆಸ್ವಾಮಿ ಅಯ್ಯಂಗಾರ್ ಮೊದಲಾದವರು ಮೈಸೂರು ಚಲೋ ಹೋರಾಟಕ್ಕೆ ಜನರನ್ನು
ಸಂಘಟಿಸಿದರು. ಈ ಹೋರಾಟ ನಡೆಯುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳೂ
ಭಾಗವಹಿಸಿದ್ದರು. ಹೀಗೆ ಚಳವಳಿಗಾರರು ಮೆರವಣಿಗೆಯಲ್ಲಿ ಈಗಿನ ರಾಮಸ್ವಾಮಿ ವೃತ್ತದ ಬಳಿ
ಬಂರುತ್ತಿದ್ದಾಗ ಜಿಲ್ಲಾಧಿಕಾರಿಯಾಗಿದ್ದ ನಾಗರಾಜರಾವ್ ಎಂಬವರು ವಿದ್ಯಾರ್ಥಿಗಳತ್ತ
ಗುಂಡು ಹಾರಿಸಿದರು. ಆ ಗುಂಡು ರಾಮಸ್ವಾಮಿ ಎಂಬ ವಿದ್ಯಾರ್ಥಿ ಸಾವಿಗೀಡಾದರು. ಅವರ
ನೆನಪಿಗಾಗಿ ಆ ವೃತ್ತಕ್ಕೆ ರಾಮಸ್ವಾಮಿ ವೃತ್ತ ಎಂದು ನಾಮಕರಣ ಮಾಡಲಾಯಿತು.
ಮುಂದೆ ಹೋರಾಟ ಪ್ರಬಲಗೊಂಡು ಮೈಸೂರು ಮಹಾರಾಜರು ಬೇರೆ ದಾರಿಯಿಲ್ಲದೆ ಭಾರತ
ಗಣರಾಜ್ಯದಲ್ಲಿ ಮೈಸೂರು ರಾಜ್ಯವನ್ನು ಸೇರಿಸಲು ಒಪ್ಪಿಕೊಂಡರು. ಹಾಗಾಗಿ 1947ರ
ಅಕ್ಟೋಬರ್ 24ರಂದು ಮೈಸೂರು ರಾಜ್ಯಕ್ಕೆ ಸ್ವಾತಂತ್ರ್ಯ ಬಂತು.