Breaking News

ಮೈಸೂರು ಆಕಾಶವಾಣಿ ಶುರುವಾಗಿದ್ದು ಒಂಟಿಕೊಪ್ಪಲಿನ ಈ ಮನೆಯಲ್ಲಿ!

ಮೈಸೂರು ಆಕಾಶವಾಣಿ ಶುರುವಾಗಿದ್ದು ಒಂಟಿಕೊಪ್ಪಲಿನ ಈ ಮನೆಯಲ್ಲಿ!

ಇಂದಿಗೂ ತನ್ನದೇ ಛಾಪು ಉಳಿಸಿಕೊಂಡಿರುವ ಮೈಸೂರು ಆಕಾಶವಾಣಿಗೆ ತನ್ನದೇ ಆದ ಇತಿಹಾಸವಿದೆ. ನಮ್ಮ ದೇಶ ರೇಡಿಯೋ ಬಗ್ಗೆ ಇನ್ನೂ ಕೇಳಿರದ ಸಂದರ್ಭದಲ್ಲಿ ಮುಂಬೈ ಹಾಗೂ ಕೊಲ್ಕತ್ತಾದಲ್ಲಿ ಎರಡು ರೇಡಿಯೋ ಕೇಂದ್ರಗಳು ಆರಂಭಗೊಂಡವು. ದೇಶದಲ್ಲಿ ಆರಂಭಗೊಂಡ ಮೂರನೇ ರೇಡಿಯೋ ಕೇಂದ್ರ ಎಂಬ ಹೆಗ್ಗಳಿಕೆ ಮೈಸೂರಿನದು.

ಅದಕ್ಕೆ ಕಾರಣಕರ್ತರಾದವರು ಡಾ. ಎಂ.ವಿ. ಗೋಪಾಲಸ್ವಾಮಿ. ಮೂಲತಃ ಮನಃಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಗೋಪಾಲಸ್ವಾಮಿ ಅವರು ಆಕಾಲದಲ್ಲೇ ಹಲವಾರು ವೈಜ್ಞಾನಿಕ ಆವಿಷ್ಕಾರ ಹಾಗೂ ಪ್ರಥಮಗಳಿಗೆ ಕಾರಣರಾದರು. 1935ನೇ ಇಸವಿಯಲ್ಲಿ ಬಿಬಿಸಿ ಮಾದರಿಯಲ್ಲಿ ಇಲ್ಲೊಂದು ರೇಡಿಯೋ ಕೇಂದ್ರ ಆರಂಭಿಸಬೇಕು ಎಂಬುದು ಗೋಪಾಲಸ್ವಾಮಿ ಅವರ ಕನಸಾಗಿತ್ತು. ಅದಕ್ಕಾಗಿ ಅವರು ವಿದೇಶದಿಂದ ಶಬ್ದ ಬಿತ್ತರಿಸುವ ಯಂತ್ರವೊಂದನ್ನು ತರಿಸಿದರು.

ಏಕಕಾಲದಲ್ಲಿ ದೂರದಲ್ಲಿರುವ ಹಲವರು ಕೇಳಲು ಸಾಧ್ಯವಾಗಬಹುದಾದ ಈ ರೇಡಿಯೋ ತರಂಗವನ್ನು ಒಂಟಿಕೊಪ್ಪಲಿನಲ್ಲಿದ್ದ ತಮ್ಮ ನಿವಾಸ ‘ವಿಠಲ ವಿಹಾರ’ ದಲ್ಲೇ ಆರಂಭಿಸಲು ನಿರ್ಧರಿಸಿದರು. ಅದರ ಫಲವಾಗಿ 1935ರ ಸೆಪ್ಟಂಬರ್ 10ರಂದು ಮೈಸೂರು ರೇಡಿಯೋವನ್ನು 10 ಕೆವಿ ತರಂಗಾಂತರ ಕಂಪನದೊಂದಿಗೆ ಶುರು ಮಾಡಲಾಯಿತು. ಹಲವಾರು ತಾಂತ್ರಿಕ ಕಷ್ಟಗಳನ್ನು ಎದುರಿಸುತ್ತಲೇ ಗೋಪಾಲಸ್ವಾಮಿ ಅವರು ಈ ರೇಡಿಯೋವನ್ನು ತಮ್ಮ ಸ್ವಂತ ಖರ್ಚಿನಲ್ಲೇ ನಡೆಸಿದರು. ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ಕಾಲೇಜಿನಲ್ಲಿ ಪಾಠ ಮಾಡಿ, ತಮ್ಮ ಬಿಡುವಿಲ್ಲದ ಸಮಾಜಸೇವೆಯ ಒತ್ತಡದ ನಡುವೆಯೂ ರೇಡಿಯೋವನ್ನು ಮುನ್ನಡೆಸಿದರು.

ಆ ದಿನಗಳಲ್ಲಿ ಗೋಪಾಲಸ್ವಾಮಿ ಅವರು ರೇಡಿಯೋಗಾಗಿ ಪಟ್ಟ ಪಾಡನ್ನು ಸಂದರ್ಶನವೊಂದರಲ್ಲಿ ಅವರ ಶ್ರೀಮತಿ ಕಮಲಾ ಗೋಪಾಲಸ್ವಾಮಿ ಅವರು ಹೀಗೆ ಹೇಳಿದ್ದಾರೆ…” ಸಾಯಂಕಾಲ ಕಾಲೇಜಿನಿಂದ ಬಂದ ಮೇಲೆ 6ಗಂಟೆಗೆ ರೇಡಿಯೋ ಕೆಲಸ ಶುರು ಮಾಡ್ತಾ ಇದ್ರು. ಅದು ರಾತ್ರಿ 12ಕ್ಕೋ 1ಕ್ಕೋ ಮುಗೀತಾ ಇತ್ತು. ಈ ನಡುವೆ ತಮ್ಮ ಸ್ನೇಹಿತರ ಮನೆಗೆ ಫೋನ್ ಮಾಡಿ ರೇಡಿಯೋ ಬರ್ತಾ ಇದೆಯಾ, ಹೇಗೆ ಬರ್ತಾ ಇದೆ ಅಂತಾ ವಿಚಾರಿಸ್ತಾ ಇದ್ರು.’

ಇಷ್ಟೆಲ್ಲಾ ಪಾಡು ಪಟ್ಟುಕೊಂಡು ಗೋಪಾಲಸ್ವಾಮಿ ಅವರು ಸುಮಾರು 10 ವರ್ಷಗಳ ಕಾಲ ಮೈಸೂರು ಆಕಾಶವಾಣಿಯನ್ನು ತಾವೇ ದುಡ್ಡ ಹಾಕಿ ನಡೆಸಿದರು. ಈಗಿನಂತೆ ಆಗ ಯಾವ ಜಾಹೀರಾತುಗಳು ಬರುತ್ತಿರಲಿಲ್ಲ ಎಂಬುದು ವಿಶೇಷ. ರೇಡಿಯೋಗೊಂಡು ಶುದ್ಧ ಕನ್ನಡದ ಹೆಸರಿಡಬೇಕು ಅಂತ ಹಠಹಿಡಿದವರು ಗೋಪಾಲಸ್ವಾಮಿ ಅವರೇ. ಅದರ ಫಲವಾಗಿ ಕಸ್ತೂರಿ ಅವರು ಹೇಳಿದ ಆಕಾಶವಾಣಿ ಎಂಬ ಹೆಸರು ಹುಟ್ಟಿಕೊಂಡಿತು.

ನಂತರ ಈಗಿರುವ ಕಟ್ಟಡದಲ್ಲಿ ಆಕಾಶವಾಣಿ ಕೇಂದ್ರ ಆರಂಭಗೊಂಡಿತು.