Breaking News

ಅರಸರ ಇತಿಹಾಸ ಹೇಳುವ ವೀರನಗೆರೆ ಕೋಟೆಯ ತುಣಕು

ಅರಸರ ಇತಿಹಾಸ ಹೇಳುವ ವೀರನಗೆರೆ ಕೋಟೆಯ ತುಣಕು

ನೀವು ಬೆಂಗಳೂರು ಕಡೆಯಿಂದೇನಾದರೂ ಬರುವವರಾಗಿದ್ದರೆ ಮೈಸೂರು ನಗರವನ್ನು ಪ್ರವೇಶಿಸುತ್ತಲೇ ಫೌಂಟನ್ ಸರ್ಕಲ್ ನಿಮ್ಮನ್ನು ಸ್ವಾಗತಿಸುತ್ತದೆ. ಅಲ್ಲಿಂದ ನೇರ ಒಂದಷ್ಟು ದೂರ ಅಶೋಕರಸ್ತೆಯಲ್ಲಿ ನಗರದೊಳಗೆ ಸಾಗಿದರೆ ಎಡಗಡೆ ನಿಮ್ಮ ಗಮನವನ್ನು ತಕ್ಷಣಕ್ಕೆ ಸೆಳೆಯುವ ಕೋಟೆಯ ಪ್ರವೇಶದ್ವಾರದ ಎರಡು ಗೋಪುರಗಳು ಕಾಣಿಸುತ್ತವೆ. ಅರರೆ, ಏನಿದು ನಗರದೊಳಗೊಂದು ಕೋಟೆ ಎಂದು ನೀವು ಹುಬ್ಬೇರಿಸಿ ಆ ಪ್ರವೇಶದ್ವಾರದತ್ತ ನಡೆದರೆ ಇತಿಹಾಸದ ಗತವೈಭವನ್ನು ನೆನಪಿಗೆ ತರುವ, ಆಧುನಿಕ ನಗರದ ನಡುವೆಯೂ ಗ್ರಾಮಪರಂಪರೆಯನ್ನು ಅಲ್ಲಲ್ಲಿ ಉಳಿಸಿಕೊಂಡಿರುವ ಊರೊಂದು ಸಿಗುತ್ತದೆ. ಅದುವೇ ವೀರನಗೆರೆ. ಈ ಊರಿನ ಸುತ್ತ ಇರುವ ಪಳೆಯುಳಿಕೆಯೇ ವೀರನಗೆರೆಯ ಕೋಟೆ.

ವಿಜಯದ ಸಂಕೇತವಾಗಿ, ನಾಡಿನ ರಕ್ಷಣೆಯಂತಹ ಮಹತ್ವದ ಉದ್ದೇಶಕ್ಕಾಗಿ ನಿರ್ಮಾಣಗೊಂಡದ್ದು ವೀರನಗೆರೆ ಕೋಟೆ. ನಗರದ ಅಶೋಕ ರಸ್ತೆಯ ಕೊನೆಯಲ್ಲಿ ನರಸಿಂಹರಾಜ ಪ್ರಾಥಮಿಕ ಪಾಠ ಶಾಲೆ ಹಾಗೂ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡಗಳ ಬಳಿ ತನ್ನ ಅವಶೇಷಗಳೊಂದಿಗೆ ಈ ಕೋಟೆ ತನ್ನ ವೈಭವದ ದಿನಗಳನ್ನು ಭಾರವಾದ ಹೃದಯದೊಂದಿಗೆ ನೆನಪಿಸಿಕೊಳ್ಳುತ್ತ ನಿಂತಂತೆ ಭಾಸವಾಗುತ್ತದೆ.

ಇತಿಹಾಸದ ಕಣ್ಣಿಂದ: ಅದು 1610ರ ದಶಕ. ಮೈಸೂರು ಸಂಸ್ಥಾನವನ್ನು ವಿಸ್ತರಣೆ ಮಾಡಬೇಕು ಎಂಬುದು ಆಗಿನ ಮೈಸೂರು ರಾಜ ರಾಜಒಡೆಯರ್ ಮಹದಾಸೆ. ಈಗಿನ ಕೆಸರೆ ಎಂಬುದು ವೀರನಾಯಕ ಎಂಬ ಪಾಳೇಗಾರನ ಹಿಡಿತದಲ್ಲಿತ್ತು. ಶ್ರೀರಂಗಪಟ್ಟಣವನ್ನು ಶ್ರೀರಂಗರಾಯ ಎಂಬ ವಿಜಯನಗರ ಪ್ರತಿನಿಧಿ ಆಳುತ್ತಿದ್ದ. ಕೆಸರೆಯ ಮೇಲೆ ಸೈನ್ಯ ಸಮೇತ ನುಗ್ಗಿದ ರಾಜ ಒಡೆಯರ್ ಅವರಿಗೆ ವೀರನಾಯಕ ಸುಲಭದ ತುತ್ತಾಗಿ ಹೋದ. ತನ್ನ ದಂಡಿನ ಸಮೇತ ರಾಜ ಒಡೆಯರಿಗೆ ಸೋತು ಶರಣಾದ. ಆದರೆ, ಕಾವೇರಿ ನದಿಯಿಂದ ಸುತ್ತುವರಿದಿದ್ದ ಶ್ರೀರಂಗಪಟ್ಟಣವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂಬುದು ರಾಜ ಒಡೆಯರ್ ಅವರ ಕನಸಾಗಿತ್ತು. ಶ್ರೀರಂಗರಾಯನ ಮೇಲೆ ಯುದ್ಧ ಸಾರಿ, ಯಶಸ್ವಿಯಾದ ಅವರು ಶ್ರೀರಂಗಪಟ್ಟಣವನ್ನೇ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದರು.

ಆದರೆ, ಮೈಸೂರು ನಗರಕ್ಕೆ ಗಡಿ ಗುರುತಿಸದೆ ಹೋದರೆ ಮತ್ತೆ ಅಪಾಯಕ್ಕೆ ಆಹ್ವಾನ ನೀಡುವುದು ಖಚಿತ ಎಂಬುದು ರಾಜ ಒಡೆಯರಿಗೆ ಗೊತ್ತಿತ್ತು. ಅವರ ಇಂಗಿತಕ್ಕೆ ಪೂರಕವೆಂಬಂತೆ ಜಾರಿಗೆ ಬಂದದ್ದು, ವೀರನಗೆರೆ ಕೋಟೆ. ಗಡಿ ತಂಟೆಯನ್ನೇ ನೆಪ ಮಾಡಿಕೊಂಡು ಮೈಸೂರು ರಾಜರೊಂದಿಗೆ ಯುದ್ಧಕ್ಕೆ ಬಂದಿದ್ದ ಕೆಸರೆಯ ಪಾಳೇಗಾರ ವೀರನಾಯಕ ಹೆಸರಿನಲ್ಲೇ ಈ ಕೋಟೆಯನ್ನು ನಿರ್ಮಾಣ ಮಾಡಲಾಯಿತು.

ಉತ್ತರಕ್ಕೆ ಈಗಿನ ಗುಮಚಿ ಶಾಲೆ, ಪೂರ್ವಕ್ಕೆ ಮೈಸೂರು ಹಾಲು ಒಕ್ಕೂಟ, ದಕ್ಷಿಣಕ್ಕೆ ಮಧುವನ ಹಾಗೂ ಪಶ್ಚಿಮಕ್ಕೆ ಕುಕ್ಕರಹಳ್ಳಿ ಕೆರೆಯನ್ನು ಗಡಿಯನ್ನಾಗಿ ಮಾಡಿಕೊಂಡು ನಿರ್ಮಾಣಗೊಂಡದ್ದು ವೀರನಕೆರೆ ಕೋಟೆ. ತೀರಾ ಇತ್ತೀಚಿನವರೆಗೂ ಈ ಕೋಟೆಯ ಅವಶೇಷಗಳು ಅಲ್ಲಲ್ಲಿ ಕಾಣಸಿಗುತ್ತಿದ್ದವು. ನಗರೀಕರಣದ ಪ್ರಭಾವದ ಕಾರಣದಿಂದಾಗಿ ಈ ಐತಿಹಾಸಿಕ ಕುರುಹುಗಳು ಒಂದೊಂದಾಗಿ ಮರೆಯಾಗಿವೆ.  ಉತ್ತರ ದ್ವಾರದಲ್ಲಿ ಮಾತ್ರ ಈಗಲೂ ಇತರೆ ಒಂದಷ್ಟು ಅವಶೇಷಗಳನ್ನು ಕಾಣಬಹುದಾಗಿದೆ. ಆಗಿನ ಕಾಲಕ್ಕೆ ಈ ಕೋಟೆ ಹೊರಗಿನ ಶತ್ರುಗಳಿಂದ ನಗರದ ನಾಗರಿಕರನ್ನು ಸಂರಕ್ಷಣೆ ಮಾಡುತ್ತಿತ್ತು ಎಂದು ಇತಿಹಾಸ ಹೇಳುತ್ತದೆ.

ಈಗಲೂ ವಿಜಯ ದಶಮಿಯ ದಿನ ಸೀಮೋಲ್ಲಂಘನೆ ಮಾಡುವುದೆಂದರೆ ವೀರನಗೆರೆ ಕೋಟೆಯ ಗಡಿಯಿಂದ ಆಚೆಗೆ ಹೋಗುವುದು ಎಂದೇ ಅರ್ಥ. ಇದೇ ಅರ್ಥದಲ್ಲಿ ಇಂದಿಗೂ ವಿಜಯದಶಮಿಯ ದಿನದಂದು ಜಂಬೂ ಸವಾರಿಯ ಸಮೇತ ನಗರದ ಹೊರ ವಲಯದಲ್ಲಿರುವ ಬನ್ನಿ ಮಂಟಪದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸುವುದು ಇದೇ ಉದ್ದೇಶದಿಂದ.
ಇಂತಹ ಅಪರೂಪದ ಐತಿಹಾಸಿಕ ಘಟನಾವಳಿಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ಇಂತಹದೊಂದು ಕೋಟೆಯನ್ನು ಸಂರಕ್ಷಿಸಬೇಕಾಗಿರುವ ಹೊಣೆಗಾರಿಕೆ ಎಲ್ಲರ ಮೇಲೂ ಇದೆ ಎಂಬುದನ್ನು ಯಾರೂ ನಿರಾಕರಿಸಲಾರರು. ಜಿಲ್ಲಾಡಳಿತವಾಗಲೀ, ಸ್ಮಾರಕಗಳನ್ನು ರಕ್ಷಿಸುವ ಹೊಣೆ ಹೊತ್ತಿರುವ ಪ್ರಾಚ್ಯವಸ್ತು ಇಲಾಖೆಯಾಗಲೀ ಅಥವಾ ಪಾರಂಪರಿಕ ಘಟಕದ ಅಧಿಕಾರಿಗಳಾಗಲೀ ಈ ಕೋಟೆಯ ರಕ್ಷಣೆ ಮಾಡದಿರುವುದು ವಿಷಾದಕರ ಸಂಗತಿ.