Breaking News

ಪರಂಪರೆಯ ಪ್ರತೀಕ ಮೈಸೂರು ಪೇಟ

ಮೈಸೂರು:  ಅರಮನೆ, ಚಾಮುಂಡಿಬೆಟ್ಟ, ದಸರಾ ಇಂತಹ ಹತ್ತು ಹಲವು ಖ್ಯಾತಿಗಳೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಪೇಟದ ಮಹತ್ವವೂ ಇದೆ.

ಮೈಸೂರು ಸಂಸ್ಥಾನದಲ್ಲಿ ಮಹಾರಾಜರಾದಿಯಾಗಿ ಎಲ್ಲರೂ ಪೇಟ ಧರಿಸುತ್ತಿದ್ದು ಗೊತ್ತೇ ಇದೆ. ಹೊರಗಿನಿಂದ ಸಾಂಸ್ಕೃತಿಕ ಮೈಸೂರಿಗೆ ಯಾರೇ ಆಗಮಿಸಲಿ ಅವರಿಗೆ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಗೌರಿಸುವುದು ಪ್ರತೀತಿ. ರಾಹುಲ್ ಗಾಂಧಿಯಾಗಲಿ, ಪ್ರಧಾನಿ ನರೇಂದ್ರ ಮೋದಿಯಾಗಲಿ, ವಿಜ್ಞಾನಿ ಮತ್ತು ಮಾಜಿ ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ಎಲ್ಲರೂ ಮೈಸೂರು ಪೇಟ ತೊಟ್ಟು ಸಂಭ್ರಮಿಸಿದವರೆ.
ಅಂತ ಪೇಟವನ್ನು ತಯಾರಿಸುವುದು ಒಂದು ಕಲೆ. ರಾಜರ ಕಾಲದಿಂದಲೂ ಮೈಸೂರಿನಲ್ಲಿ  ಕುಟುಂಬವೊಂದು ಸದ್ದಿಲ್ಲದೆ ಪೇಟ ತಯಾರಿಸುವ ಕಾಯಕದಲ್ಲಿ ಇಂದಿಗೂ ತೊಡಗಿಸಿಕೊಂಡು ಬಂದಿದೆ.

ಪೇಟ ತಯಾರಿಸುವವರಲ್ಲಿ ಪ್ರಮುಖರಾದ ದೇವಯ್ಯನವರು `ಪೇಟದ ದೇವಯ್ಯ’ ಎಂದೇ ಪ್ರಖ್ಯಾತಿ ಹೊಂದಿದವರು. ಅವರ ಕುಟುಂಬದವರು ಆ ಕಲೆಯನ್ನು ಈವರೆಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಮೈಸೂರು ಅರಸರ ಪೈಕಿ  ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಿಂದ ಇಂದಿನ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಂತರವೂ ಈ ಕುಟುಂಬ ನಿರಂತರ `ಪೇಟದ ಸೇವೆ’ ಸಲ್ಲಿಸಿದೆ.

ಪೇಟದ ದೇವಯ್ಯ:  ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಾವಧಿಯಲ್ಲಿ ಪೇಟ ತಯಾರಿಕೆಯಲ್ಲಿ ಛಾಪು ಮೂಡಿಸಿದ್ದ ಪೇಟದ ದೇವಯ್ಯ ಅವರ ಮೊಮ್ಮಗ (ಮಗಳು ಸಾಕಮ್ಮ ಅವರ ಮಗ) ಪರಮೇಶ್ ಪ್ರಸ್ತುತ ಮೈಸೂರು ರಾಜವಂಶಸ್ಥರಿಗೆ ಪೇಟ ಮಾಡುತ್ತಿರುವ ಮೂರನೇ ತಲೆಮಾರಿನ ಕುಡಿ. ಪೇಟದ ದೇವಯ್ಯ ಅವರಿಂದ ಪ್ರೇರಣೆಗೊಂಡು ಅಳಿಯ ಶಿವರಾಮ್ ಪೇಟ ಕಟ್ಟುವಲ್ಲಿ ನಿಪುಣತೆ ಸಾಧಿಸಿದ್ದರು. ಸುಮಾರು 30 ವರ್ಷಗಳ ಕಾಲ ಪೇಟ ಕಟ್ಟಿದ ಶಿವರಾಂ ಕಾಲವಾದರು. ಈ ಅವಧಿಯಲ್ಲಿ ಮಗನಿಗೂ ಪೇಟ ಕಟ್ಟುವ ಕಲೆ ಕಲಿಸಿಕೊಟ್ಟ ಪರಿಣಾಮ ಹಾಗೂ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪೂರಕ ಬೆಂಬಲದಿಂದಾಗಿ ಈಗ ಪೇಟ ಕಟ್ಟುವ ಜವಾಬ್ದಾರಿ ಪರಮೇಶ್ ಅವರಿಗೆ ವರ್ಗಾಯಿಸಲಾಗಿದೆ.

ನವರಾತ್ರಿ ಆರಂಭವಾಗುವ ಮುನ್ನ ದಿನವಿಡೀ ಪೇಟ ಸಿದ್ದಪಡಿಸುವುದೇ ಕಾಯಕ. ದಸರಾ ಸಂದರ್ಭದಲ್ಲಿ ಪರಮೇಶ್ ಅವರಿಗೆ ಬಿಡುವಿಲ್ಲದ ಕೆಲಸ. ಒಡೆಯರ್ ಅವರ ತಲೆಯ ಅಳತೆಗೆ ತಕ್ಕಂತೆ ಸಿದ್ದಪಡಿಸಬೇಕಾದ ಹಿನ್ನೆಲೆಯಲ್ಲಿ ಅವರ ಸಮ್ಮುಖವೇ ಕೆಲಸ ಮಾಡಬೇಕು. ಸುಮಾರು 54 ಬಗೆಯ ಪೇಟ ಮಾಡುವ ಪರಮೇಶ್, ಒಡೆಯರ್ ಅವರಿಗಾಗಿ ಚಿನ್ನ ಹಾಗೂ ಬೆಳ್ಳಿ ಜರಿ ಹೊಂದಿದ ಪೇಟ ಸಿದ್ಧಪಡಿಸುತ್ತಾರೆ. ರಾಜವಂಶಸ್ಥರು ಧರಿಸುವ ಪೇಟ ಚಿನ್ನ, ಬೆಳ್ಳಿ ಜರಿಯೊಂದಿಗೆ ಮುತ್ತಿನ ಕುಚ್ಚು ಹಾಗೂ ವಜ್ರದ ಅಲಂಕಾರದಿಂದ ಕೂಡಿರುತ್ತದೆ.

ಶಿವಲಿಂಗಾಕೃತಿಯ ಮರದ ಕೊರಡಿನ ಅಚ್ಚು ಇಲ್ಲಿ ಅತಿ ಮುಖ್ಯ ಸಾಧನ. ನಂತರ ಓಲೆಗರಿಯಲ್ಲಿ ಪೇಟದ ಮಾದರಿಯ ಫೌಂಡೇಷನ್ ಮಾಡಿಕೊಂಡು ಅದರ ಸುತ್ತಲೂ ಬಟ್ಟೆ ಸುತ್ತಿ , ತದನಂತರ ಯಾವ ಭಾಗದಲ್ಲಿ ವಿನ್ಯಾಸಗೊಳಿಸಬೇಕೋ ಆ ಭಾಗದಲ್ಲಿ ಹತ್ತಿಯಿಂದ ವಿನ್ಯಾಸ ಮಾಡಲಾಗುತ್ತದೆ. ಇದಾದ ಬಳಿಕ ಜರಿ ಬಟ್ಟೆಯನ್ನು ಅದರ ಆಕಾರಕ್ಕೆ ತಕ್ಕಂತೆ ಹೊಲಿಗೆ ಹಾಕಲಾಗುತ್ತದೆ.

ಪೇಟ ಮಾರಾಟಕ್ಕೆ ಫೇಮಸ್ಸು ಕಾಡಯ್ಯ ಜವಳಿ ಅಂಗಡಿ

ಅರಮನೆ ಪೇಟ ತಯಾರಿಕೆಗೆ ಎಷ್ಟು ಮಹತ್ವವಿದೆಯೋ ಮಾರಾಟಕ್ಕೂ ಅಷ್ಟೇ ಮಹತ್ವವಿದೆ. ಇಂತಹ ಜಗತ್ಪ್ರಸಿದ್ಧ ಪೇಟಗಳನ್ನು ತಯಾರು ಮಾಡುತ್ತಿದ್ದವರು ಕಾಡಯ್ಯನವರು. ಇವರ ಕುಟುಂಬದ ಸದಸ್ಯರು ಇಂದಿಗೂ ಪೇಟಗಳನ್ನು ತಯಾರಿಸಿ ಪೂರೈಕೆ ಮಾಡುತ್ತಿದ್ದಾರೆ.

ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ 1886ರಲ್ಲಿ `ಕಾಡಯ್ಯ ಹೊಸ ಜವಳಿ ಅಂಗಡಿ’ ಆರಂಭಿಸಿದರು.  ಬನಾರಸ್ ಮುಂತಾದ ಕಡೆಯಿಂದ ಕಚ್ಚಾ ವಸ್ತುಗಳನ್ನು ತಂದು ಪೇಟ ತಯಾರಿಸುತ್ತಿದ್ದರು. ಇಲ್ಲಿ ತಯಾರಿಸಿದ ಪೇಟಗಳು ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ರಾಜಮಹಾರಾಜರ ಮುಡಿಗೇರುತ್ತಿದ್ದವು. ನರಸಿಂಹರಾಜ ಒಡೆಯರಿಗೆ ದರ್ಬಾರ್ ವೇಳೆಯಲ್ಲಿ ಕಿವಿ ಮೇಲೆ ದಪ್ಪವಿರುವ ದುಂಡಾದ ಪೇಟ ತಯಾರಿಸಿಕೊಟ್ಟಿದ್ದರು.

ಇಂದಿಗೂ ಮೈಸೂರು ಪೇಟಗಳಿಗೆ ಬಹಳ ಬೇಡಿಕೆ ಇದೆ. ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಮಾಡಲು, ಮದುವೆ, ವಿಶ್ವವಿದ್ಯಾನಿಲಯದ ಘಟಿಕೋತ್ಸವ ಹೀಗೆ ಅನೇಕ ಸನ್ನಿವೇಶಗಳಲ್ಲಿ ಪೇಟಗಳಿಗೆ ಬೇಡಿಕೆ ಇದೆ ಎಂದು ಅಂಗಡಿಯ ಮಾಲೀಕರೊಬ್ಬರು ಹೇಳುತ್ತಾರೆ.