Breaking News

ಕುಶಾಲತೋಪು ಶುಭ ಸೂಚಕ

ಕುಶಾಲತೋಪು ಶುಭ ಸೂಚಕ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಸಿದ್ಧತೆ ಆರಂಭಗೊಂಡಿದ್ದು, ಶುಕ್ರವಾರ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನ ಓದಿ….

ಸ್ವತಂತ್ರ ಭಾರತಕ್ಕೂ ಮುನ್ನ ರಾಜಾಡಳಿತವಿದ್ದ ಕಾಲದಲ್ಲಿ ಮಹಾರಾಜನರ ವರ್ಧಂತಿ, ಶತ್ರುಗಳನ್ನು ಹಿಮ್ಮೆಟ್ಟಿಸಲು, ಶುಭ ಕಾರ್ಯಕ್ಕೂ ಮುನ್ನ ಹಾಗೂ ವಿಜಯದ ಸಂಕೇತವಾಗಿ ಕುಶಾಲ ತೋಪುಗಳನ್ನು ಹಾರಿಸುತ್ತಿದ್ದದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಪ್ರಸ್ತುತ ರಾಜಾಡಳಿತ ಇಲ್ಲವಾದರೂ ರೂಢಿಸಿಕೊಂಡು ಬಂದ ಸಂಪ್ರದಾಯ ಮುಂದುವರೆದಿದೆ. ಪ್ರತಿ ವರ್ಷ ವಿಜಯದಶಮಿ ದಿನದಂದು ಚಿನ್ನದಂಬಾರಿ ಮೆರವಣಿಗೆ ಆರಂಭವಾಗುವ ಮುನ್ನ ಮೈಸೂರು ಅರಮನೆ ಆವರಣದಲ್ಲಿ 21 ಸುತ್ತು ಕುಶಾಲ ತೋಪುಗಳನ್ನು ಹಾರಿಸಲಾಗುತ್ತದೆ. ಜಂಬೂ ಸವಾರಿ ಆರಂಭವಾಯಿತು ಎಂಬ ಸೂಚನೆ ನಾಡಿನ ಜನತೆಗೆ ಲಭಿಸಲಿ ಎಂಬುದು ಒಂದೆಡೆಯಾದರೆ, ಅಂಬಾರಿಯಲ್ಲಿ ವಿರಾಜಮಾನಳಾದ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಭಕ್ತಿಪೂರ್ವಕವಾದ ಪ್ರಣಾಮ ಸೂಚಿಸುವುದು ಮತ್ತೊಂದು.

ವರ್ಷಕ್ಕೊಮ್ಮೆ ಜಂಬೂ ಸವಾರಿಯ ದಿನದಂದು ಹಾರಿಸಲಾಗುವ ಕುಶಾಲತೋಪುಗಳ ಉಸ್ತುವಾರಿಯನ್ನು ದಶಕಗಳ ಹಿಂದಿನಿಂದಲೂ ನಿರ್ವಹಿಸುತ್ತಿರುವವರು ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್)ಸಿಬ್ಬಂದಿ.
ಪ್ರಸಕ್ತ ಸಾಲಿನ ಕುಶಾಲತೋಪು ಸಿಡಿಸುವ ಕಾರ್ಯ ನಗರ ಸಶಸ್ತ್ರ ಮೀಸಲು ಪಡೆ ಸಹಾಯಕ ಪೊಲೀಸ್ ಆಯುಕ್ತ ಸಿದ್ದರಾಜು ಅವರ ನೇತೃತ್ವದಲ್ಲಿ ನಡೆಯಲಿದೆ. ಸುಮಾರು 30 ಮಂದಿ ನುರಿತ ಪೇದೆಗಳನ್ನು ಪ್ರತಿ ವರ್ಷ ಈ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದ್ದು, ಈಗಾಗಲೇ ತರಬೇತಿ ಆರಂಭವಾಗಿದೆ.

ಮೈಸೂರು ಅರಮನೆಯಲ್ಲಿ 11 ಫಿರಂಗಿ ಗಾಡಿಗಳಿದ್ದು, 1640 ಹಾಗೂ 1650ರ ನಡುವೆ ಅವುಗಳನ್ನು ತಂದಿರುವ ಬಗ್ಗೆ ಅರಮನೆ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಎತ್ತುಗಳನ್ನು ಕಟ್ಟಿ ಫಿರಂಗಿಗಳನ್ನು ಎಳೆಯುವ(ಸಪರ್ೋಟಿಂಗ್) ನಾಲ್ಕು ಗಾಡಿಗಳಿವೆ. ಮೂರು ಹಿತ್ತಾಳೆಯ ಫಿರಂಗಿಗಳಾದರೆ, ಉಳಿದವು ಕಬ್ಬಿಣ ಮತ್ತು ಉಕ್ಕಿನಿಂದ ತಯಾರಾಗಿವೆ. ಚಾಮುಂಡಿ ಬೆಟ್ಟದಲ್ಲೂ ಒಂದು ಹಗುರವಾದ ಫಿರಂಗಿ ಇದ್ದು, ರಥೋತ್ಸವ, ತೆಪ್ಪೋತ್ಸವದಲ್ಲಿ ಬಳಸಲಾಗುತ್ತದೆ.

ಅಕ್ರಮಣಕಾರರನ್ನು ಹಿಮ್ಮೆಟ್ಟಿಸುವ ಸಲುವಾಗಿ ಅರಮನೆ ಕೋಟೆ ಮೇಲೆ ಯಾವಾಗಲೂ ಸನ್ನದ್ಧ ಸ್ಥಿತಿಯಲ್ಲಿ ಇರುತ್ತಿದ್ದ ಫಿರಂಗಿಗಳೀಗ ಅರಮನೆ ಹಜಾರದಲ್ಲಿದ್ದು, ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ. ಒಂದೊಂದಕ್ಕೂ ಆಕರ್ಷಣೀಯ ನಾಮಧೇಯವಿದೆ.

ಇವು ಇಲ್ಲಿರುವ ಫಿರಂಗಿಗಳು:

1)15 ಅಡಿ ಉದ್ದದ ರಾಮಚಂದ್ರ(ರಾಮಭದ್ರ)
2)18 ಅಡಿಯ ಕೋದಂಡರಾಮ(ಹನುಮಂತು)
3)12 ಅಡಿಯ ಮುದ್ದು ಕೃಷ್ಣ
4)30 ಅಡಿಯ ಲಕ್ಷ್ಮಿರಮಣ
5)15 ಅಡಿಯ ಚಾಮುಂಡೇಶ್ವರಿ
6)10 ಅಡಿಯ ನಾಗರಮರಿ
7)21 ಅಡಿಯ ರಂಗನಾಥ
8)21 ಅಡಿಯ ಭೈರವ
9)21 ಅಡಿಯ ರಾಮಬಾಣ
10)15 ಅಡಿಯ ಉಗ್ರನರಸಿಂಹ
11)15 ಅಡಿ ಉದ್ದದ ತ್ರಿನಯನ

ಅಶ್ವಾರೋಹಿ ಪಡೆ

*ನೆರೆ ಹೊರೆಯ ಪಾಳೆಗಾರರ ಹಾಗೂ ಸಾಮಂತ ರಾಜರ ಹುಟ್ಟಡಗಿಸಲು ಹುಟ್ಟಿಕೊಂಡಿದ್ದೇ ಅಶ್ವಾರೋಹಿ ಪಡೆ.

ಮೈಸೂರು ಸಂಸ್ಥಾನದಲ್ಲಿ ಅಶ್ವಾರೋಹಿ ಪಡೆ ರಚನೆಯಾಗಿದ್ದು 1610 ರ ಬಳಿಕ. ಶ್ರೀರಂಗಪಟ್ಟಣದಿಂದ ವಿಜಯನಗರ ಪ್ರತಿನಿಧಿಯನ್ನು ಹೊಡೆದೋಡಿಸಿದ ಬಳಿಕ ದೊರೆತ ಅಮೂಲ್ಯ ವಸ್ತುಗಳ ಪೈಕಿ ಕುದುರೆ, ಆನೆಗಳೂ ಸೇರಿದ್ದವು.

ಮೈಸೂರು ರಾಜರ ಬಳಿ ಅಶ್ವಾರೋಹಿ ಪಡೆ ಹಾಗೂ ಸೈನಿಕರು ಇದ್ದರಾದರೂ ಅವರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿತ್ತು. ರಾಜ ಒಡೆಯರ್ ಅವರ ಕಾಲದಲ್ಲಿಯೇ ಮೈಸೂರು ಆಸ್ಥಾನದಲ್ಲಿ ಪಕ್ಕಾ ಸೈನ್ಯವೊಂದು ರಚನೆಯಾಯಿತಾದರೂ ಶ್ರೀರಂಗಪಟ್ಟಣ ಮೈಸೂರು ಸಂಸ್ಥಾನದ ವ್ಯಾಪ್ತಿಗೆ ಸೇರಿದ ನಂತರದಲ್ಲಿ ಅದಕ್ಕೊಂದು ಸ್ಪಷ್ಟರೂಪು ಸಿಕ್ಕಿತು.

ಪಾಳೆಗಾರನಾಗಿದ್ದ ರಾಜ ಒಡೆಯರ್ ತನ್ನ ಕೌಶಲ್ಯ ಹಾಗೂ ಶಕ್ತಿಯಿಂದ ರಾಜನ ಮಟ್ಟಕ್ಕೆ ಬೆಳೆದಿದ್ದರು. ಈ ನಡುವೆ ಕುದುರೆ, ಆನೆ, ಕಾಲಾಳು ಎಂಬ ತಂಡಗಳಾಗಿ ವಿಭಜಿಸಿ ಪ್ರತಿಯೊಂದಕ್ಕೂ ದಳವಾಯಿಗಳನ್ನು ನೇಮಿಸಲಾಗಿತ್ತು.

ನಂತರದಲ್ಲಿ ಬಂದ ರಣಧೀರ ಕಂಠೀರವ ಹಾಗೂ ಚಿಕ್ಕದೇವರಾಜ ಒಡೆಯರ್ ಅವರು ಸೈನ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದಲ್ಲದೇ, ಸುತ್ತಮುತ್ತಲಿನ ಪಾಳೆಗಾರರ ಮಣಿಸುವುದರಲ್ಲಿ ಯಶಸ್ವಿಯಾಗಿದ್ದರು. ಮುಮ್ಮಡಿ ಒಡೆಯರ್ ಅವರ ಕಾಲದಲ್ಲಿ ಅದಕ್ಕೆ ಮತ್ತಷ್ಟು ಉತ್ತೇಜನ ನೀಡಲಾಯಿತು.

ಇರಾನ್ನಿಂದ ಆಮದು: ಮೈಸೂರು ಸಂಸ್ಥಾನದಲ್ಲಿದ್ದ ಕುದುರೆಗಳ ಪೈಕಿ ಬಹುತೇಕ ಕುದುರೆಗಳನ್ನು ಇರಾನ್ನಿಂದ ಆಮದು ಮಾಡಿಕೊಳ್ಳಲಾಗಿತ್ತು. ಅಂದು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿಜರ್ಾ ಇಸ್ಮಾಯಿಲ್ ಅವರ ತಾತ ಅಲಿ ಅಸ್ಗರ್ ಆ ಕಾಲಕ್ಕೆ ದೊಡ್ಡ ಕುದುರೆ ವ್ಯಾಪಾರಿಯಾಗಿದ್ದು, ಇರಾನ್ನಿಂದ ಭಾರತಕ್ಕೆ ಕುದುರೆಗಳನ್ನು ತಂದು ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ಬಹುತೇಕ ಕುದುರೆಗಳನ್ನು ಅಂದಿನ ರಾಜರೇ ಕೊಂಡುಕೊಳ್ಳುತ್ತಿದ್ದರು ಎನ್ನಲಾಗಿದೆ.

ಇಂದು ಜಲಪುರಿಯಲ್ಲಿರುವ ವಸತಿ ಗೃಹಗಳನ್ನು ಅಂದು ಅಶ್ವಾರೋಹಿ ದಳದ ಸೈನಿಕರಿಗೆ ನೀಡಲಾಗಿತ್ತು. ಅಶ್ವಾರೋಹಿ ಪಡೆಯ ಸೈನಿಕರು ಮಹಾರಾಜರಿಗೆ ಸದಾ ಕಾವಲಿಗಿರುತ್ತಿದ್ದರು. ಇದಕ್ಕಾಗಿಯೇ ಅಂದಿನ ರಾಜರು `ಹಿಸ್ ಹೈನೆಸ್ ಮಹಾರಾಜ ಓನ್ ಇನ್ಫ್ಯಾಂಟ್ರಿ’ ಎಂಬ ಹೆಸರಿನಲ್ಲಿ ಅವರನ್ನು ನಿಯೋಜಿಸಿಕೊಂಡಿದ್ದರು.

ಇಂದು ಆ ಪ್ರಮಾಣದಲ್ಲಿ ಅಶ್ವಗಳು ಇಲ್ಲವಾದರೂ, ಅದರ ಕುರುಹು ಮೈಸೂರಿನಲ್ಲಿ ಉಳಿದಿದೆ. ಈಗ ಅಶ್ವಾರೋಹಿ ಪಡೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಕುದುರೆಗಳಿವೆ. ದಸರಾ ವೇಳೆ ಮೆರವಣಿಗೆಯಲ್ಲಿ ಭಾಗವಹಿಸಲು, ಜನಸಂದಣಿ ಹಾಗೂ ಪ್ರತಿಭಟನೆ ವೇಳೆ ಗಲಭೆ ನಿಯಂತ್ರಿಸಲು ಬಳಸಿಕೊಳ್ಳಲಾಗುತ್ತಿದೆ.